ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ ಮಾಡಿ 'ಪರಿಷ್ಕೃತ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

2021-22ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳನ್ನು ಏಪ್ರಿಲ್ 22 ರಿಂದ ಮೇ 18,2022ರ ವರೆಗೆ ನಿಗದಿಪಡಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಅಲ್ಪ ಬದಲಾವಣೆಯೊಂದಿಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ.
ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಿರುವ ಈ ವೇಳಾಪಟ್ಟಿಯನ್ನು ನೋಡಬಹುದು. ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ದಿನಾಂಕ ಪರಿಷ್ಕರಣೆ ಆಗಿರುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಜೆಇಇ ಮೇನ್ ವೇಳಾಪಟ್ಟಿ ಬಿಡುಗಡೆ ನಂತರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ವಿಷಯಗಳು ಒಂದೇ ದಿನ ಇದ್ದ ಕಾರಣ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ವೇಳಾಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.
ಅಂತಿಮ ವೇಳಾಪಟ್ಟಿಯಲ್ಲಿನ ಅಲ್ಪ ಬದಲಾವಣೆ ಅನುಸಾರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಏಪ್ರಿಲ್ 22 ರಿಂದ ಮೇ 18,2022ರ ವರೆಗೆ ನಡೆಯಲಿದೆ. ಇಲ್ಲಿ ಯಾವುದೇ ಪರೀಕ್ಷೆಯ ದಿನಾಂಕಗಳನ್ನು ಮುಂದೂಡಲಾಗಿಲ್ಲ ಬದಲಾಗಿ ಪರೀಕ್ಷಾ ದಿನಾಂಕಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಸಂಪೂರ್ಣ ವೇಳಾಪಟ್ಟಿಯನ್ನು ವೀಕ್ಷಿಸಲು ಮುಂದೆ ನೋಡಿ.

ದ್ವಿತೀಯ ಪಿಯು ಪರಿಷ್ಕೃತ ಅಂತಿಮ ವೇಳಾಪಟ್ಟಿ :
ಏಪ್ರಿಲ್ 22, 2022: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏಪ್ರಿಲ್ 23, 2022: ಗಣಿತ, ಶಿಕ್ಷಣ ಶಾಸ್ತ್ರ
ಏಪ್ರಿಲ್ 25, 2022: ಅರ್ಥಶಾಸ್ತ್ರ
ಏಪ್ರಿಲ್ 26, 2022: ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ರಸಾಯನಶಾಸ್ತ್ರ, ಮೂಲ ಗಣಿತ,
ಏಪ್ರಿಲ್ 27, 2022: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಏಪ್ರಿಲ್ 28, 2022: ಕನ್ನಡ, ಅರೇಬಿಕ್
ಮೇ 04, 2022: ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 05, 2022: ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್ ಮೇ 06, 2022: ಇಂಗ್ಲೀಷ್
ಮೇ 10, 2022: ಇತಿಹಾಸ, ಭೌತಶಾಸ್ತ್ರ
ಮೇ 12,2022 : ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14, 2022: ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮೇ 17, 2022: ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮೇ 18, 2022: ಹಿಂದಿ

2021-22ನೇ ಸಾಲಿನ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪಠ್ಯಕ್ರಮದಲ್ಲಿ ಹಾಗೂ ಪ್ರಶ್ನೆಪತ್ರಿಕೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಭಾಷಾ ವಿಷಯಗಳಲ್ಲಿ ಶೇಕಡ.30 ರಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಿದ್ದು, ಶೇಕಡ.70ರಷ್ಟು ಪಠ್ಯಕ್ರಮಕ್ಕೆ ಮಾತ್ರ ಪರೀಕ್ಷೆ ನಡೆಸಲಾಗುವುದು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಗಳ ಪಠ್ಯಕ್ರಮದಲ್ಲಿ ಯಾವುದೇ ಕಡಿತವಿಲ್ಲದೆ ಶೇಕಡ.100ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆಗಳನ್ನು ನಡೆಸಲಾಗುವುದು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಐಚ್ಛಿಕ ವಿಷಯಗಳಲ್ಲಿ ಪ್ರಶ್ನೆಪತ್ರಿಕೆ ತಯಾರಿಸುವಾಗ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಪ್ರಶ್ನೆಗಳನ್ನು ನೀಡಿ ವಿದ್ಯಾರ್ಥಿಗಳು ತಮಗೆ ತಿಳಿದಿರುವ ಪ್ರಶ್ನೆಗಳನ್ನು ಆರಿಸಿಕೊಂಡು ಉತ್ತರಿಸುವ ಅವಕಾಶ ಕಲ್ಪಿಸಲಾಗಿದೆ. ಇನ್ನು ಪ್ರಥಮ ಪಿಯುಸಿ ಭಾಷಾ ವಿಷಯಗಳಲ್ಲಿ 2020-21ನೇ ಸಾಲಿನಲ್ಲಿ ಕಡಿತಗೊಳಿಸಲಾಗಿದ್ದ ಶೇಕಡ 30 ರಷ್ಟು ಪಠ್ಯಕ್ರಮವನ್ನು 2021-22ನೇ ಸಾಲಿನಲ್ಲಿಯೂ ಕಡಿತಗೊಳಿಸಲಾಗಿದೆ. ಐಚ್ಛಿಕ ವಿಷಯಗಳಲ್ಲಿ ಶೇಕಡ.100 ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆಗಳನ್ನು ನಡೆಸಲಾಗುವುದು.


Click it and Unblock the Notifications