ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ಆಗಸ್ಟ್ 28 ರಿಂದ 30ರ ವರೆಗೆ ನಡೆಸಲಾಗುತ್ತಿದೆ. ಈ ಭಾರಿ 530 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಸಿಇಟಿ -2021 ಪರೀಕ್ಷೆಗೆ ಒಟ್ಟು 2,01,816 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಬೆಂಗಳೂರಿನ 86 ಕೇಂದ್ರಗಳಲ್ಲಿ ಮತ್ತು ಬೆಂಗಳೂರಿನ ಹೊರತಾಗಿ 444 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಹೊರನಾಡು (ಇತರೆ ರಾಜ್ಯ) ಮತ್ತು ಗಡಿನಾಡು (ಗಡಿ ಪ್ರದೇಶ)ಪ್ರದೇಶದ ಕನ್ನಡ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಆಗಸ್ಟ್ ೩೦ರಂದು 6 ಸ್ಥಳಗಳಲ್ಲಿ ನಡೆಯಲಿವೆ ಎಂದು ಸಚಿವರು ಹೇಳಿದ್ದಾರೆ.
"ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪರೀಕ್ಷಾ ದಿನಗಳಲ್ಲಿ ಗೃಹ ಇಲಾಖೆಯು ಆಯಾ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಾಕಷ್ಟು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುತ್ತಿದೆ" ಎಂದು ಕಚೇರಿಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಆಯಾ ಜಿಲ್ಲೆಗಳ ಉಪ ಆಯುಕ್ತರು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಸಹಾಯಕ ಆಯುಕ್ತರ ವೀಕ್ಷಕರನ್ನು ನೇಮಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಲ್ಲದೇ ಸಿಇಟಿ ಪರೀಕ್ಷೆಗೆ ಒಟ್ಟು 530 ವೀಕ್ಷಕರು, 1,060 ವಿಶೇಷ ನಿಗಾ ದಳದ ಸದಸ್ಯರು, 530 ಉಸ್ತುವಾರಿಗಳು, ಸುಮಾರು 8,409 ಇನ್ವಿಜಿಲೇಟರ್ಗಳು ಮತ್ತು 20,415 ಅಧಿಕಾರಿಗಳನ್ನು ಪರೀಕ್ಷಾ ಕರ್ತವ್ಯಗಳನ್ನು ನಿರ್ವಹಿಸಲು ನಿಯೋಜಿಸಲಾಗಿದೆ.
2021ನೇ ಸಾಲಿನ ಕರ್ನಾಟಕ ಸಿಇಟಿ ಪರೀಕ್ಷೆಗಳು ಆಗಸ್ಟ್ 28 ರಿಂದ ಆಗಸ್ಟ್ 30ರ ವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ಆಗಸ್ಟ್ 28ರಂದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳು ನಡೆಯಲಿವೆ. ಆಗಸ್ಟ್ 29 ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಆಗಸ್ಟ್ 30 ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಒಟ್ಟು 1,682 ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆಯು ನಡೆಯಲಿದೆ.
ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳು :
* ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
* ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನು ಬರೆಯಬೇಕು.
* ಸಿಇಟಿ ಸಂಖ್ಯೆಯನ್ನು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
* ಓಎಂಆರ್ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯಲ್ಲಿರುವ ಕ್ರಮ ಸಂಖ್ಯೆ ಒಂದೇ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
* ವಿದ್ಯಾರ್ಥಿಗಳು ಉತ್ತರಗಳನ್ನು ಓಎಂಆರ್ ಉತ್ತರ ಪತ್ರಿಕೆಯಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕು.
* ವಿದ್ಯಾರ್ಥಿಗಳು ಪರೀಕ್ಷೆಗೆ Blue/ Black ಬಾಲ್ ಪಾಯಿಂಟ್ ಪೆನ್ನನ್ನು ತೆಗೆದುಕೊಂಡು ಹೋಗಬೇಕು.
* ವಿದ್ಯಾರ್ಥಿಗಳು ಪರೀಕ್ಷೆಯ ಮೊದಲನೇ ಬೆಲ್ ಆಗುವ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕು.
* ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಪ್ರವೇಶ ಪತ್ರದ ಜೊತೆಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.
* ವಿದ್ಯಾರ್ಥಿಗಳು ಓ.ಎಂ.ಆರ್. ಉತ್ತರ ಹಾಳೆಯಲ್ಲಿ ಎಡಗೈ ಹೆಬ್ಬೆರಳ ಗುರುತನ್ನು ಹಾಕುವಂತಿಲ್ಲ.
* ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆಮೊಬೈಲ್, ಕೈಗಡಿಯಾರ, ಟ್ಯಾಬ್ಲೆಟ್ ಕೊಂಡೊಯ್ಯುವಂತಿಲ್ಲ.
ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಇಎ ವೆಬ್ಸೈಟ್ http://kea.kar.nic.in ಗೆ ಭೇಟಿ ನೀಡಬಹುದು.