ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್‌ಇಟಿ) ಜುಲೈ 25,2021ರಂದು ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಪರೀಕ್ಷೆಯ ಅಂತಿಮ ಕ್ಷಣಗಳ ತಯಾರಿಯಲ್ಲಿದ್ದು, ಪರೀಕ್ಷೆ ಹೇಗಿರತ್ತೆ? ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು ಎನ್ನುವ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಿದೆಯಾ ? ಹಾಗಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದಿ.

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ. ಹಾಗಾಗಿ ಅಭ್ಯರ್ಥಿಗಳು ಎಷ್ಟು ಭಾರಿಯಾದರೂ ಈ ಪರೀಕ್ಷಯನ್ನು ತೆಗೆದುಕೊಳ್ಳಬಹುದಾಗಿದೆ.
ಕರ್ನಾಟಕ ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಿಶ್ವವಿದ್ಯಾನಿಲಯ/ಪ್ರಥಮ ದರ್ಜೆ ಕಾಲೇಜುಗಳು/ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರಿ/ಅನುದಾನಿತ/ಖಾಸಗಿ) ನೇಮಕವಾಗಬೇಕಾದರೆ, ಅಭ್ಯರ್ಥಿಗಳು ಕಡ್ಡಾಯವಾಗಿ ಕೆಎಸ್‌ಇಟಿ ಅಥವಾ ಎನ್.ಇ.ಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕೆಂಬ ನಿಯಮವಿದೆ.
ಕೆಸೆಟ್ ಪರೀಕ್ಷೆಯು ಜುಲೈ 25,2021ರ ಭಾನುವಾರದಂದು 41 ವಿಷಯಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ 11 ನೋಡಲ್ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ಉಳಿದ ಒಂದು ತಿಂಗಳಿನಲ್ಲಿ ಹೇಗೆ ಅಧ್ಯಯನ ಮಾಡಬೇಕು? ಎನ್ನುವ ಗೊಂದಲಕ್ಕೂ ಮೊದಲು ಪರೀಕ್ಷೆ ಹೇಗಿರುತ್ತೆ ಎನ್ನುವುದನ್ನ ಇಲ್ಲಿ ತಿಳಿಯಿರಿ.
ಪರೀಕ್ಷಾ ಪಠ್ಯಕ್ರಮ:
ಹೌದು ನೀವು ಯಾವುದೇ ಪರೀಕ್ಷೆಯನ್ನು ತೆಗೆದುಕೊಂಡಿರುವುದಾದರೆ ಮೊದಲು ಪರೀಕ್ಷೆಗಿರುವ ಪಠ್ಯಕ್ರಮವನ್ನು ತಿಳಿಯುವುದು ಮುಖ್ಯ.
ಕೆಎಸ್‌ಇಟಿ ಪರೀಕ್ಷಾ ಪಠ್ಯಕ್ರಮವು, ಯು.ಜಿ.ಸಿ/ ಸಿ.ಎಸ್.ಐ.ಆರ್ ನೆಟ್ ನಿಗದಿಪಡಿಸಿರುವ ಪಠ್ಯಕ್ರಮದ ಮಾದರಿಯಲ್ಲೇ ಇರುತ್ತದೆ. ಎಲ್ಲಾ ವಿಷಯಗಳ ಪಠ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯ ವೆಬ್‌ಸೈಟ್ http://kset.uni-mysore.ac.in/ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕೆಎಸ್‌ಇಟಿ ಕೇಂದ್ರವು ವಿಷಯಗಳ ಪಠ್ಯಕ್ರಮವನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಕಳುಹಿಸಲಾಗುವುದಿಲ್ಲ.
ಕೆಎಸ್‌ಇಟಿ ಪರೀಕ್ಷೆಯ ಮಾದರಿ:
ಕೆಎಸ್‌ಇಟಿ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿರುತ್ತವೆ. ಎರಡು ಪತ್ರಿಕೆಗಳು ಸಹ ಬಹುಸಂಖ್ಯಾ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
ಮೊದಲ ಅವಧಿಯಲ್ಲಿ 50 ಪ್ರಶ್ನೆಗಳಿದ್ದು ಒಟ್ಟು 100 ಅಂಕಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯು ಬೆಳಿಗ್ಗೆ 9:30 ರಿಂದ 10:30 ರ ವರೆಗೆ ನಡೆಯಲಿದೆ.
ಎರಡನೇ ಅವಧಿಯಲ್ಲಿ 100 ಪ್ರಶ್ನೆಗಳಿದ್ದು ಒಟ್ಟು 200 ಅಂಕಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯು 11 ಗಂಟೆಯಿಂದ 1 ಗಂಟೆಯ ವರೆಗೆ ನಡೆಯಲಿದೆ.
ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಗಳ ಪ್ರಶ್ನೆ ಪತ್ರಿಕೆಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಕಂಡುಬಂದಲ್ಲಿ, ಇಂಗ್ಲೀಷ್ ಆವೃತ್ತಿಗಳಲ್ಲಿರುವುದೇ ಅಂತಿಮವೆಂದು ಪರಿಗಣಿಸಬೇಕು.
ಪರೀಕ್ಷಾ ವಿಷಯಗಳು ಹೀಗಿವೆ:
ಪತ್ರಿಕೆ 1: ಸಾಮಾನ್ಯ ಪತ್ರಿಕೆಯು ಬೋಧನೆ ಮತ್ತು ಬುದ್ದಿ ಸಾಮಾರ್ಥ್ಯಕ್ಕನುಗುಣವಾಗಿರುತ್ತದೆ:
ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುವಂತಹದ್ದಾಗಿರುತ್ತದೆ. ಈ ಪತ್ರಿಕೆಯಲ್ಲಿ 50 ಬಹುಸಂಖ್ಯಾ ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ ಎರಡು ಅಂಕಗಳಿರುತ್ತದೆ ಹಾಗೂ ಎಲ್ಲಾ ಪ್ರಶ್ನೆಗಳಿಗೂ ಕಡ್ಡಾಯವಾಗಿ ಉತ್ತರಿಸಬೇಕಾಗಿರುತ್ತದೆ.
ಪತ್ರಿಕೆ 2: ವಿಷಯ ಪತ್ರಿಕೆ
ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯದ ಸಾಮಾನ್ಯ ಜ್ಞಾನದಲ್ಲಿ ಈ ಪತ್ರಿಕೆಯು ಇರುತ್ತದೆ. ಈ ಪತ್ರಿಕೆಯು 100 ಕಡ್ಡಾಯ ಬಹುಸಂಖ್ಯಾ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೂ 2 ಅಂಕಗಳಿರುತ್ತದೆ. ಗರಿಷ್ಟ 200 ಅಂಕಗಳಿರುತ್ತವೆ.
ಪರೀಕ್ಷೆಯಲ್ಲಿ ಪ್ರಶ್ನೆ ಪುಸ್ತಕದ ಜೊತೆಗೆ ನೀಡುವ ಪೇಪರ್ 1 ಮತ್ತು ಪೇಪರ್ 2 ರ ಒ.ಎಂ.ಆರ್. ಹಾಳೆಯಲ್ಲಿ ನಿಗದಿ ಪಡಿಸಿದ ನಮೂನೆಯಲ್ಲಿಯೇ ಉತ್ತರಗಳನ್ನು ಗುರುತಿಸಬೇಕು.
ಕೆಎಸ್‌ಇಟಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಯ ವಿಧಾನ ಹೇಗಿರತ್ತೆ:
ಅಭ್ಯರ್ಥಿಗಳು ಕೆಎಸ್‌ಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಸಲುವಾಗಿ ಫಲಿತಾಂಶ ಪ್ರಕಟಣೆಯ ನಿಯಮ ಮತ್ತು ಹಂತಗಳು ಇಲ್ಲಿವೆ.
ಸಹಾಯಕ ಪ್ರಾಧ್ಯಾಪಕರ ಅರ್ಹತೆಯನ್ನು ಪರಿಗಣಿಸಬೇಕಾದರೆ, ಪತ್ರಿಕೆ I ಮತ್ತು ಪತ್ರಿಕೆ IIರಲ್ಲೂ ಹಾಜರಾಗಿ, ಸಾಮಾನ್ಯ ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಶೆ. 40 ಅಂಕಗಳು ಮತ್ತು ಮೀಸಲಾತಿ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-I /IIಎ/ IIಬಿ / IIIಎ / IIIಬಿ /ಅಂಗವಿಕಲ ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಶೇ. 35 ಅಂಕಗಳನ್ನು ಗಳಿಸಿರಬೇಕು. ಅಂತಹ ಅಭ್ಯರ್ಥಿಗಳನ್ನು ಮಾತ್ರ ಅರ್ಹತಾ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು. ರಾಜ್ಯ ಸರ್ಕಾರದ ಮೀಸಲಾತಿ ನೀತಿಯ ಅನುಸಾರವಾಗಿ ಲೆಕ್ಕಾಚಾರ ಮಾಡಿ ಸಹಾಯಕ ಪ್ರಾಧ್ಯಾಪಕರ ಫಲಿತಾಂಶವನ್ನು ಪ್ರಕಟಿಸಲಾಗುವುದು.
ಪರೀಕ್ಷಾ ಕೇಂದ್ರಗಳು:
ಕೆಎಸ್‌ಇಟಿ ಪರೀಕ್ಷೆಯನ್ನು ಕರ್ನಾಟಕ ರಾಜ್ಯದಲ್ಲಿ 11 ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ, ನೋಡಲ್ ಕೇಂದ್ರಗಳ ಕೋಡ್‌ಗಳನ್ನು ಕೇಂದ್ರದ ಹೆಸರಿನೊಂದಿಗೆ ಕೊಡಲಾಗಿದೆ.


Click it and Unblock the Notifications











