ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈ 17 ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಯುಜಿ 2022ರ (NEET UG 2022) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ ವೈದ್ಯಕೀಯ ಪ್ರವೇಶದಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

NEET UG 2022ರ ಅರ್ಜಿ ಪ್ರಕ್ರಿಯೆಯನ್ನು ಏಪ್ರಿಲ್ 6 ರಿಂದ ಪ್ರಾರಂಭಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್-neet.nta.nic.in ಗೆ ಭೇಟಿ ನೀಡಿ ಮೇ 6,2022ರೊಳಗೆ ಅರ್ಜಿ ಸಲ್ಲಿಸಬಹುದು. ನೀಟ್ ಪರೀಕ್ಷೆಯು ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ನಡೆಯಲಿದೆ.

NEET UG 2022: ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪರಿಚಯಿಸಲಾದ ಬದಲಾವಣೆಗಳ ಪಟ್ಟಿ ಇಲ್ಲಿದೆ :
ವಯಸ್ಸಿನ ಮಿತಿಯನ್ನು ತೆಗೆದುಹಾಕಲಾಗಿದೆ :
NEET UG 2022 ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಲಾಗಿದೆ. ಕಳೆದ ವರ್ಷ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 25 ವರ್ಷಗಳು ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷಗಳನ್ನು ನೀಡಲಾಗಿತ್ತು.

ಅರ್ಜಿ ಶುಲ್ಕ ಹೆಚ್ಚಳ :
NEET UG 2022 ರ ಅರ್ಜಿ ಶುಲ್ಕವನ್ನು ಈ ವರ್ಷ ಹೆಚ್ಚಿಸಲಾಗಿದೆ. ಕಳೆದ ವರ್ಷ ಸಾಮಾನ್ಯ ವರ್ಗದ ನೋಂದಣಿ ಶುಲ್ಕ 1,500/- ರೂಪಾಯಿ ಇದ್ದದನ್ನು ಈ ವರ್ಷ 1,600/- ರೂಪಾಯಿಗೆ ಹೆಚ್ಚಿಸಲಾಗಿದೆ. ಭಾರತದ ಹೊರಗಿನ ಅಭ್ಯರ್ಥಿಗಳು ಕಳೆದ ವರ್ಷ 7,500/-ರೂ ಪಾವತಿಸಿದ್ದರು ಆದರೆ ಈ ಭಾರಿ 8,500/- ರೂ ಅನ್ನು ಪಾವತಿಸಬೇಕಿರುತ್ತದೆ. ಆರ್ಥಿಕವಾಗಿ ಹಿಂದುಳಿದ/ ಒಬಿಸಿ ಎನ್ಸಿಎಲ್ ಆಭ್ಯರ್ಥಿಗಳು 1,500/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 800/-ರೂ ಅನ್ನು ಪಾವತಿಸಬೇಕಿರುತ್ತದೆ.

ಪರೀಕ್ಷೆಯ ಅವಧಿ ಹೆಚ್ಚಳ :
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NEET UG 2022 ರ ಪರೀಕ್ಷೆಯ ಅವಧಿಯನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳು ಈಗ NEET ಪತ್ರಿಕೆಯನ್ನು ಪರಿಹರಿಸಲು ಹೆಚ್ಚುವರಿ 20 ನಿಮಿಷಗಳನ್ನು ಪಡೆಯಲಿದ್ದಾರೆ. ಒಟ್ಟಾರೆ ನೀಟ್ ಪರೀಕ್ಷಾ ಅವಧಿ 200 ನಿಮಿಷಗಳು (3 ಗಂಟೆ 20 ನಿಮಿಷಗಳು).

ಹೊಸ ಪರೀಕ್ಷಾ ನಗರಗಳ ಸೇರ್ಪಡೆ :
ಈ ವರ್ಷ NEET UG 2022ಗೆ ಹೊಸ ಪರೀಕ್ಷಾ ನಗರಗಳನ್ನು ಸೇರಿಸಲಾಗಿದೆ. NEET 2022 ಪರೀಕ್ಷೆಯು ಭಾರತದಾದ್ಯಂತ 543 ನಗರಗಳಲ್ಲಿ ಮತ್ತು ಭಾರತದ ಹೊರಗಿನ 14 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. NEET UG 2022 ಪರೀಕ್ಷೆಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಥೈಲ್ಯಾಂಡ್, ಶ್ರೀಲಂಕಾ, ಕತಾರ್, ನೇಪಾಳ, ಮಲೇಷ್ಯಾ, ಕುವೈತ್, ನೈಜೀರಿಯಾ, ಬಹ್ರೇನ್, ಓಮನ್, ಸೌದಿ ಅರೇಬಿಯಾ ಮತ್ತು ಸಿಂಗಾಪುರ ಸೇರಿದಂತೆ ಒಟ್ಟು 12 ದೇಶಗಳಲ್ಲಿ ನಡೆಯಲಿದೆ.
NEET UG 2022 ಅಧಿಸೂಚನೆಯು ಅಧಿಕೃತ ವೆಬ್ಸೈಟ್- neet.nta.nic.in ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ಪರೀಕ್ಷೆಯ ಮಾದರಿ, ಪಠ್ಯಕ್ರಮ, ನೋಂದಣಿ ಕುರಿತು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.