ಇದೇ ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಖಾಸಗಿ ನಿಯೋಜಕರುಗಳ ಸಂಯುಕ್ತ ಆಶ್ರಯದಲ್ಲಿ ಮೇಳ ನಡೆಯುತ್ತಿದೆ.
ಈ ಉದ್ಯೋಗ ಮೇಳದಲ್ಲಿ ಖಾಸಗಿ ವಲಯದ 40 ಕ್ಕೂ ಹೆಚ್ಚು ಹೆಸರಾಂತ ಸಂಸ್ಥೆಗಳು ಭಾಗವಹಿಸುತ್ತಿದ್ದು, ವಿವಿಧ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸ್ಥಳದಲ್ಲೇ ನೇರವಾಗಿ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ನಿರುದ್ಯೋಗ ಯುವಕ / ಯುವತಿಯರಿಗೆ ನೇರ ಸಂದರ್ಶನಕ್ಕೆ ಅನುಕೂಲವಾಗುವಂತೆ ಈ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 26 ರ ಗುರುವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಸರ್ಕಾರಿ ವಿಜ್ಞಾನ ಕಾಲೇಜು, ನೃಪತುಂಗ ರಸ್ತೆ, ಬೆಂಗಳೂರು - 560 001 ಇಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಷರಸ್ಥರು, ಅರ್ಧದಲ್ಲಿಯೇ ಶಾಲೆ ಬಿಟ್ಟವರು ಹಾಗೂ ಎಸ್.ಎಸ್.ಎಲ್.ಸಿ. ಫೇಲ್, ಎಸ್.ಎಸ್. ಎಲ್.ಸಿ. ಪಾಸ್, ಪಿ.ಯು.ಸಿ, ಐ.ಟಿ.ಐ ಮತ್ತು ಡಿಪ್ಲೊಮಾ (ಎಲ್ಲಾ ಟ್ರೇಡ್ಗಳು) ಮತ್ತು ಪದವೀಧರರು ಹಾಗೂ ಸ್ನಾತಕೋತ್ತರ ಪದವಿ ಹೊಂದಿದವರಿಗೆ ಉದ್ಯೋಗ ಅವಕಾಶಗಳು ಲಭ್ಯವಿದೆ.
ಉದ್ಯೋಗಾಕಾಂಕ್ಷಿಗಳು ತಮ್ಮ ವೈಯಕ್ತಿಕ (ಬಯೋಡಾಟಾ) ವಿವರಗಳೊಂದಿಗೆ ಉದ್ಯೋಗ ಮೇಳ ದಲ್ಲಿ ಭಾಗವಹಿಸಿ ಉದ್ಯೋಗ ದೊರೆಯುವ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ದೂರವಾಣಿ ಸಂಖ್ಯೆ 22289668, 22261184, 22374582, 22268846 ಹಾಗೂ 22259351 ಸಂಪರ್ಕಿಸಬಹುದಾಗಿದೆ.
ಉದ್ಯೋಗ ಮೇಳಕ್ಕೆ ತಯಾರಾಗಿ ಹೋಗಿ
- ಮೊದಲನೆಯದಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಅಲ್ಲಿಗೆ ಹೋಗುವ ಮುನ್ನ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.
- ಸಂದರ್ಶನದ ವೇಳೆಗಿಂತ ಸ್ವಲ್ಪ ಮೊದಲೇ ಸ್ಥಳ ತಲುಪಿ.
- ಸರಳವಾದ ಉಡುಗೆ ಧರಿಸಿ. ಮೇಕಪ್ ಸಹ ಸರಳವಾಗಿ ಗೌರವಯುತವಾಗಿದ್ದು, ಸ್ಮಾರ್ಟ್ ಲುಕ್ ಕೊಡುವಂತೆ ಇರಬೇಕು.
- ನಿಮ್ಮ ಸಾಮರ್ಥ್ಯ, ಕೆಲಸದ ಬಗೆಗಿರುವ ಆಸಕ್ತಿ, ಶ್ರಮ, ದುಡಿಮೆ, ಪ್ರಾಮಾಣಿಕತನದ ಬಗ್ಗೆ ಹೇಳಿ. ನೆನಪಿರಲಿ, ಆತ್ಮಪ್ರಶಂಸೆ ಅತಿಯಾಗದಂತೆ ಗಮನ ವಹಿಸಿ.
- ನಿಮಗಿರುವ ಪರಿಣತಿ, ವಿಶೇಷ ಅರಿವು, ಎಂಥ ಒತ್ತಡಕ್ಕೂ ಒಳಗಾಗದೇ ದುಡಿಯುವ ಮನೋಭಾವ, ಎಲ್ಲದರಲ್ಲೂ ನಿಮಗಿರುವ ಜ್ಞಾನದ ಬಗ್ಗೆ ತಿಳಿಸಿ ಅವರ ಗಮನ ಸೆಳೆಯಿರಿ


Click it and Unblock the Notifications











