ದ್ವಿತೀಯ ಪಿಯುಸಿ ಆದ ತಕ್ಷಣ ಇಂಜಿನಿಯರಿಂಗ್ ಕಡೆ ವಾಲುತ್ತಿದ್ದವರ ಸಂಖ್ಯೆಯಲ್ಲಿ ಈ ಬಾರಿ ಭಾರಿ ಇಳಿಕೆಯಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಂಜಿನಿಯರಿಂಗ್ ಕೋರ್ಸ್ ಗಳ ಸಿಇಟಿ ಸೀಟು ಹಂಚಿಕೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಶೇ 20 ರಷ್ಟು ಕಡಿಮೆ ದಾಖಲಾತಿಯಾಗಿದೆ. ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ ಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಇಂಜಿನಿಯರಿಂಗ್ ಸೇರುವವರ ಸಂಖ್ಯೆ ಕಡಿಮೆ ಇದೆ.
ಕಾಮೆಡ್ ಕೆ ಗಿಂತ ಮುಂಚಿತವಾಗಿಯೇ ಕೌನ್ಸಲಿಂಗ್ ನಡೆಸಿ,ಸೀಟು ಆಯ್ಕೆಗಾಗಿ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳನ್ನು ನೀಡಿತ್ತಾದರು ಈ ಬಾರಿಯ ಕೌನ್ಸಲಿಂಗ್ ನಲ್ಲಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಡೆ ಗಮನ ನೀಡದಿರವುದು ಅಚ್ಚರಿ ಉಂಟು ಮಾಡಿದೆ.

ಈ ಬಾರಿ ಕರ್ನಾಟಕದಲ್ಲಿ 26 ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ 12385 ಇಂಜಿನಿಯರಿಂಗ್ ಸೀಟುಗಳಿದ್ದವು. ಅವುಗಳಲ್ಲಿ ಕೇವಲ 9462 ಸೀಟುಗಳ ಮಾತ್ರ ಭರ್ತಿಯಾಗಿವೆ. ಇನ್ನು 171 ಖಾಸಗಿ ಶಿಕ್ಷಣ ಸಂಸ್ಥೆಗಳ 101076 ಸೀಟುಗಳ ಪೈಕಿ ಕೇವಲ 71580 ಸೀಟುಗಳ ಭರ್ತಿಯಾಗಿವೆ.
ವಿದ್ಯಾರ್ಥಿಗಳು ವಿಜ್ಞಾನ ಪದವಿ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಬೇಸಿಕ್ ಸೈನ್ಸ್ ಕಲಿತು ಉನ್ನತ ಶಿಕ್ಷಣ ಮತ್ತು ಸಂಶೋಧನೆ ಕಡೆಗೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ಇಂಜಿನಿಯರಿಂಗ್ ಬೇಡಿಕೆ ಕಡಿಮೆಯಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರಿ ಸೀಟುಗಳಲ್ಲದೇ ಖಾಸಗಿ ಕಾಲೇಜುಗಳಲ್ಲೂ ಇಂಜಿನಿಯರಿಂಗ್ ಪದವಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಇಂಜಿನಿಯರಿಂಗ್ ಕೋರ್ಸ್ ಗೆ ಬೇಡಿಕೆ ಕಡಿಮೆಯಾಗಲು ಉದ್ಯೋಗಾವಕಾಶಗಳ ಕೊರತೆಯೂ ಕಾರಣವಾಗಿದೆ. ಇಂದು ವಿದ್ಯಾರ್ಥಿಗಳು ಯಾವ ಕೋರ್ಸ್ ಮಾಡಿದರೆ ಏನು ಅನುಕೂಲ ಎನ್ನವುದನ್ನು ಅರಿತಿದ್ದಾರೆ. ಅವರ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಅವರ ಇಷ್ಟದ ಕ್ಷೇತ್ರದ ಕೋರ್ಸ್ ಗಳಿಗೆ ಸೇರುತ್ತಿದ್ದಾರೆ. ಅಲ್ಲದೇ ಐಟಿ ಕಂಪನಿಗಳಲ್ಲೂ ಇಂಜಿನಿಯರ್ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿದೆ. ಎನ್ನುವುದು ಅಧಿಕಾರಿಯೊಬ್ಬರ ಅಭಿಪ್ರಾಯ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇಂಜಿನಿಯರಿಂಗ್ ಸೇರುವುವರ ಸಂಖ್ಯೆ ಹೆಚ್ಚಾಗಿಯೇ ಇದೆ. ತಮಿಳುನಾಡಿನಲ್ಲಿ ಶೇ.51 ರಷ್ಟು ಸೀಟುಗಳು ಉಳಿಕೆಯಾಗಿವೆ. ಹಿಮಾಚಲ ಪ್ರದೇಶದಲ್ಲಿ 83.04, ಉತ್ತರಖಂಡದಲ್ಲಿ 74.23, ಹರಿಯಾಣದಲ್ಲಿ 73.23 ಮತ್ತು ಚತ್ತಿಸಘಡದಲ್ಲಿ 64.56 ಸೀಟುಗಳು ಹಾಗೆ ಉಳಿದಿವೆ


Click it and Unblock the Notifications











