ಸಿಲಿಕಾನ್ ಸಿಟಿ ಬೆಂಗಳೂರಿಗೆ ಇಂದು ಐದು ಹೊಸ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗಿದೆ. ಏನಿದು ದಿಢೀರ್ ನೇಮಕ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಐದು ಮಕ್ಕಳು ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸು ಹೊಂದಿದ್ದರು. ಅವರ ಕೊನೆಯ ಆಸೆಯನ್ನು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನನಸು ಮಾಡಿದ್ದಾರೆ.

ರುತನ್ ಕುಮಾರ್, ಮಹಮದ್ ಶಕೀಬ್, ಅರ್ಷಾಥ್ ಪಾಷಾ, ಶ್ರಾವಣಿ ಬಂಟ್ಟಾಳ, ಸಯ್ಯದ್ ಇಮಾದ್ ಈ 5 ಮಕ್ಕಳನ್ನು ಒಂದು ದಿನದ ನಗರದ ಪೋಲೀಸ್ ಆಯುಕ್ತರನ್ನಾಗಿ ಮಾಡುವ ಮೂಲಕ ಅವರ ಆಸೆಯನ್ನು ಈಡೇರಿಸಿದ್ದಾರೆ.
ಮೇಕ್ ಅ ವಿಷ್ ಫೌಂಡೇಶನ್ ಸಹಾಯದಿಂದ ಪೋಲಿಸ್ ಸಮವಸ್ತ್ರದಲ್ಲಿ ಬಂದಿದ್ದ ಮಕ್ಕಳಿಗೆ ಮೊದಲು ಗಾರ್ಡ್ ಆಫ್ ಹಾನರ್ ನೀಡಿದರು. ಮಕ್ಕಳ ಕೈಗೆ ಲಾಠಿ, ಶಸ್ತ್ರಾಸ್ತ್ರ ಸಹ ನೀಡಲಾಗಿತ್ತು. ಕೈ ಕೋಳ, ವಯರ್ಲೆಸ್ ಅನ್ನು ಕೈಯಲ್ಲಿ ಹಿಡಿದು ಮಕ್ಕಳು ಖುಷಿಪಟ್ಟರು. ನಂತರ ಮಕ್ಕಳನ್ನು ಆಯುಕ್ತರ ಕುರ್ಚಿಯಲ್ಲಿ ಕೂರಿಸಲಾಯಿತು.
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಐವರು ಮಕ್ಕಳು ಸಬ್ಇನ್ಸ್ಪೆಕ್ಟರ್ ಆಗಬೇಕೆಂಬ ಕನಸು ಹೊಂದಿದ್ದಾರೆ ಅದನ್ನು ನನಸು ಮಾಡಲು ಅವಕಾಶ ನೀಡಿ ಎಂದು ಮೇಕ್ ಅ ವಿಷ್ ಫೌಂಡೇಶನ್ ಸಿಬ್ಬಂದಿ ಮನವಿ ಮಾಡಿದ್ದರು. ಆದರೆ ಈಗ ಸಬ್ಇನ್ಸ್ಪೆಕ್ಟರ್ ಏಕೆ ಆಯುಕ್ತರನ್ನಾಗಿಯೇ ಮಾಡೋಣ ಎಂದು ಹೇಳಿ ಮಕ್ಕಳ ಆಸೆಯನ್ನು ಈಡೇರಿಸಲಾಗಿದೆ ಎಂದು ನಗರದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.


Click it and Unblock the Notifications











