ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಬೆಂಗಳೂರಿನ ಶಾಲೆಗಳನ್ನು ತಜ್ಞರ ಅಭಿಪ್ರಾಯ ಪಡೆದು ಪುನರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ (ಜ.21) ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ಕರೆದಿದ್ದು, ರಾಜ್ಯದ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಲೆಗಳ ಪುನರಾರಂಭದ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಅವರು ಬುಧವಾರ ಸ್ಪಷ್ಟಪಡಿಸಿದರು.
ಸದ್ಯ ಬೆಂಗಳೂರಿನಲ್ಲಿ ಮಾತ್ರ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚು ಇರುವುದರಿಂದ ಬೆಂಗಳೂರಿನ ಶಾಲೆಗಳನ್ನು ಮಾತ್ರ ಬಂದ್ ಮಾಡಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿವರ ಪಡೆಯುತ್ತಿದ್ದೇನೆ. ನಗರದಲ್ಲಿ ದಿನಕ್ಕೆ 25,000 ದಿಂದ 30,000 ಜನರಿಗೆ ಪಾಸಿಟಿವ್ ಬರುತ್ತಿದ್ದರೂ ಸಹ ಮಕ್ಕಳಿಗೆ ಪಾಸಿಟಿವ್ ಕಡಿಮೆ ಇದೆ ಎಂಬ ಮಾಹಿತಿ ನೀಡಿದ್ದಾರೆ. ಅದನ್ನೂ ಸಹ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಶುಕ್ರವಾರ ನಡೆಯುವ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಶಾಲೆಗಳನ್ನು ಪುನರಾರಂಭಿಸಬಹುದು ಎಂದು ಸಲಹೆ ನೀಡಿದರೆ ಮರುದಿನವೇ ಶಾಲೆಗಳನ್ನು ಮತ್ತೆ ಆರಂಭಿಸಲಾಗುವುದು. ಶಾಳೆಗಳಿಗೆ ಬರುವುದಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಯಾರಾಗಿದ್ದಾರೆ. ಹಾಗಾಗಿ ಎಲ್ಲಾ ಸೂಕ್ತ ನಿರ್ದೇಶನಗಳನ್ನೂ ಪಾಲಿಸಿಕೊಂಡು ಶಾಲೆಯಲ್ಲಿಯೇ ಅಗತ್ಯ ಶಿಕ್ಷಣ ಒದಗಿಸಲಾಗುವುದು ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಒಂದು ವೇಳೆ ಎಲ್ಲಾ ತರಗತಿಗಳನ್ನು ಪುನರಾರಂಭಿಸಲು ಅನುಮತಿ ದೊರೆಯದಿದ್ದಲ್ಲಿ 9 ಮತ್ತು 10ನೇ ತರಗತಿಗಳ ಆರಂಭದ ಕುರಿತು ಸೂಕ್ತ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.
ಮೈಸೂರು, ಶಿವಮೊಗ್ಗ, ಧಾರವಾಡ ಹೀಗೆ ನಾಲ್ಕೈದು ಜಿಲ್ಲೆಗಳಲ್ಲಿ ಸಂಪೂರ್ಣ ಶಾಲೆಗಳನ್ನು ಮುಚ್ಚಲಾಗಿದೆ. ಉಳಿದೆಡೆ ಎಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆಯೋ ಆ ಶಾಲೆಯನ್ನು ಮಾತ್ರ ಮುಚ್ಚುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಹುತೇಕ ಕಡೆಗಳಲ್ಲಿ ಶಾಲೆಗಳೇ ಮಕ್ಕಳಿಗೆ ಸುರಕ್ಷಿತ ಎಂಬ ಅಭಿಪ್ರಾಯವೂ ಕೇಳಿಬರುತ್ತದೆ. ಶಾಲೆಯಲ್ಲಿ ಇದ್ದ ಮಗುವಿಗೆ ಒಂದು ವೇಳೆ ರೋಗಲಕ್ಷಣ ಕಂಡುಬಂದಿಲ್ಲಿ ಕೂಡಲೇ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತದೆ. ಆದರೆ, ಮನೆಯಲ್ಲಿ ಇರುವಂತಹ ಮಕ್ಕಳಿಗೆ ತುರ್ತಾಗಿ ಚಿಕಿತ್ಸೆ ಕೊಡಿಸುತ್ತಿಲ್ಲ ಎಂಬ ಅಭಿಪ್ರಾಯವೂ ಇದೆ ಎಂದು ಸಚಿವರು ಹೇಳಿದರು.
ತಜ್ಞರು ಈಗಾಗಲೇ ಅಭಿಪ್ರಾಯ ಪಟ್ಟಿರುವಂತೆ ಜನವರಿ ಅಂತ್ಯ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲಿ ಕೋವಿಡ್ ಪ್ರಕರಣಗಳು ಪೀಕ್ಗೆ ಹೋಗುತ್ತವೆ ಮತ್ತು ಇದರಿಂದ ಶಾಲೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈಗಾಗಲೇ ಶೇ 80ರಷ್ಟು ಪಠ್ಯಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. ಪ್ರತೀ ವರ್ಷ ಫೆಬ್ರವರಿ ಮೊದಲ ವಾರದಲ್ಲಿ ಪರೀಕ್ಷೆಗೆ ತಯಾರಾಗುವುದಕ್ಕಾಗಿ ಪೂರ್ವಭಾವಿಯಾಗಿ ರಜೆ ಕೊಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಶಾಲೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕೋವಿಡ್ ಪರಿಸ್ಥಿತಿಗಳನ್ನು ನೋಡಿಕೊಂಡು ನಿಗದಿತ ದಿನಾಂಕಗಳಂದು ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ವರ್ಷದಿಂದ ಸುಗಮವಾಗಿ ತರಗತಿಗಳು ನಡೆಯುತ್ತವೆ ಎಂದು ಸಚಿವರು ನುಡಿದರು.