ಅದೆಷ್ಟೋ ವಿದ್ಯಾರ್ಥಿ ಮತ್ತು ಪೋಷಕರಿಗೆ ಸರ್ಕಾರಿ ಉದ್ಯೋಗ ಸಿಕ್ಕರೆ ಸಾಕು ಎನ್ನುವ ಹಂಬಲವಿರುತ್ತೆ. ಆದರೆ ಇಲ್ಲೊಬ್ಬ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಸರ್ಕಾರಿ ಹುದ್ದೆಗಳ ಜೊತೆಗೆ 30 ವರ್ಷಗಳ ವರೆಗೆ ಸರ್ಕಾರಿ ವೇತನವನ್ನು ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಬಿಹಾರದ ಸರ್ಕಾರಿ ಇಂಜಿನಿಯರ್ ಸುರೇಶ್ ರಾಮ್ ಎಂಬಾತ ವಿವಿಧ ಇಲಾಖೆಗಳಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಒಟ್ಟು ಮೂರು ಹುದ್ದೆಗಳ ಸಂಬಳ ಪಡೆಯುತ್ತಿದ್ದಾನೆ.

ಸರ್ಕಾರಿ ಕೆಲಸ :
ಇಂದು ಯುವಜನತೆಗೆ ಸರ್ಕಾರಿ ಉದ್ಯೋಗ ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲ ಹೆಚ್ಚಾಗಿದೆ. ಹೀಗಿರುವಾಗ ಒಮ್ಮೆ ಯಾವುದಾದರೂ ಸರ್ಕಾರಿ ಹುದ್ದೆಗಳ ನೇಮಕಾತಿಯ ಪ್ರಕಟಣೆ ಹೊರಡಿಸಿದರೆ ಖಾಲಿ ಇರುವ 100 ಹುದ್ದೆಗಳಿಗೆ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿಯನ್ನು ಹಾಕುತ್ತಾರೆ. ಕಾರಣ ಸರ್ಕಾರಿ ಹುದ್ದೆಗಳಿಗೆ ಅಷ್ಟರ ಮಟ್ಟಿಗೆ ಸ್ಪರ್ಧೆ ಇದೆ. ಇಂತಹ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಮೂರು ಸರ್ಕಾರಿ ಕೆಲಸ ಜೊತೆಗೆ 30 ವರ್ಷಗಳ ವರೆಗೆ ವೇತನ:
ಸರ್ಕಾರಿ ಹುದ್ದೆ ಮತ್ತು ಸರ್ಕಾರಿ ವೇತನವನ್ನು ಪಡೆಯಲು ಪ್ರಯತ್ನಗಳನ್ನು ನಡೆಸುವ ಹಲವರಲ್ಲಿ, ಒಬ್ಬ ವ್ಯಕ್ತಿಯು ಮೂರು ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು 30 ವರ್ಷಗಳವರೆಗೆ ಸಂಬಳ ಪಡೆಯುತ್ತಾನೆ ಎಂದರೆ ಇದು ಆಶ್ಚರ್ಯ ಪಡುವ ಸಂಗತಿಯೇ ಹೌದು.
ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ (ಸಿಎಫ್‌ಎಂಎಸ್)ಯಿಂದ ಸತ್ಯ ಬಯಲು :
ಕೇಂದ್ರ ಹಣಕಾಸು ಸಚಿವಾಲಯವು ಇತ್ತೀಚೆಗೆ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆಯನ್ನು (ಸಿಎಫ್‌ಎಂಎಸ್) ಪರಿಚಯಿಸಿದಾಗ, ಬಿಹಾರದ ಕೃಷ್ಣಂಜ್ ಮೂಲದ ಸುರೇಶ್ ರಾಮ್ ಅವರು ಮೂರು ವಿಭಿನ್ನ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.
ಒಂದು ಹೆಸರು, ಒಂದು ವಿಳಾಸ:
ಸಿಎಫ್ಎಂಎಸ್ ವ್ಯವಸ್ಥೆಗೆ ಸೇರ್ಪಡೆಯಾಗಲು ಉದ್ಯೋಗಿಯ ವಿವರಗಳಾದ ಆಧಾರ್, ಪಾನ್ ಕಾರ್ಡ್ ಜೊತೆ ಆತನ ವೇತನ, ವೆಚ್ಚ, ಆಸ್ತಿ ಕುರಿತ ಸಮಗ್ರ ಮಾಹಿತಿಯನ್ನು ಒದಗಿಸಲು ಸೂಚಿಸಲಾಗಿತ್ತು. ದಾಖಲೆ ಒದಗಿಸಲು ವಿಫಲಗೊಂಡಾಗ ಸುರೇಶ್ ರಾಮ್ ಮಾಡುತ್ತಿದ್ದ ಮೋಸ ಬೆಳಕಿಗೆ ಬಂದಿದೆ.
ಒಬ್ಬ ವ್ಯಕ್ತಿ, ಮೂರು ಹುದ್ದೆ ಮತ್ತು ಮೂರು ಸಂಬಳ :
ಈ ಘಟನೆ ನಂತರ ಸುರೇಶ್ ರಾಮ್ ಅವರು ಹಠಾತ್ ಕಣ್ಮರೆಯಾಗಿದ್ದಾರೆ. ಬಿಹಾರ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸುರೇಶ್ ರಾಮ್, 1998ರಲ್ಲಿ ರಸ್ತೆ ನಿರ್ಮಾಣ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಸುರೇಶ್‌ಗೆ ಮೊದಲ ಹುದ್ದೆ ಸಿಕ್ಕಿತ್ತು. ಅದರ ಮರುವರ್ಷವೇ ಜಲಸಂಪನ್ಮೂಲ ಇಲಾಖೆಗೆ ಸೇರಿದರು. ಸ್ವಲ್ಪ ಸಮಯದಲ್ಲಿ ಇದೇ ಇಲಾಖೆಯಲ್ಲಿ ಮತ್ತೊಂದು ಹುದ್ದೆ ಲಭ್ಯವಾಗಿ, ಸುಪೌಲ್ ಎಂಬಲ್ಲಿಗೆ ನಿಯೋಜನೆಗೊಂಡರು.
ಹೊಸ ಹುದ್ದೆ ಸಿಕ್ಕಾಗ ಹಿಂದಿನ ಹುದ್ದೆಗೆ ರಾಜಿನಾಮೆ ನೀಡದೆ ಎಲ್ಲ ಹುದ್ದೆಗಳಲ್ಲಿಯೂ ಉಳಿದುಕೊಂಡರು. ಏಕಕಾಲಕ್ಕೆ ಸಂಬಳವನ್ನು ಪಡೆದರು. 2018ರಲ್ಲಿ ರಸ್ತೆ ನಿರ್ಮಾಣ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿಯನ್ನೂ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆ ನಡೆಸಲಾಗುತ್ತಿದೆ :
ತನಿಖೆಯ ನಂತರ ಸುರೇಶ್ ರಾಮ್ ಹೇಗೆ ಕೆಲಸ ಪಡೆದರು ಮತ್ತು ಅವರು ಕಚೇರಿಗೆ ಹೇಗೆ ಸೇರಿದರು ಮತ್ತು ಇಷ್ಟು ಕಾಲ ಹೇಗೆ ಸಂಬಳ ಪಡೆದರು ಎಂಬ ವಿವರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.


Click it and Unblock the Notifications











