ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಹತ್ತು ಮತ್ತು ಹನ್ನೆರಡನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಜನವರಿ ಮೊದಲ ವಾರದಲ್ಲಿ ಪ್ರಕಗೊಳ್ಳುವ ನಿರೀಕ್ಷೆ ಇದೆ.
ಮಂಡಳಿಯು ಪರೀಕ್ಷಾ ತಯಾರಿಯಲ್ಲಿದ್ದು, ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಜನವರಿ ಮೊದಲ ವಾರದಲ್ಲಿ ವೇಳಾಪಟ್ಟಿ ಪ್ರಕಟಿಸುವ ಬಗ್ಗೆ ಮಂಡಳಿಯ ಪೋರ್ಟಲ್ ನಲ್ಲಿ ತಿಳಿಸಲಾಗಿದೆ.
ಇನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 2018ರಿಂದ ಮಾರ್ಕ್ ಸ್ಪೈಕಿಂಗ್ ಗೆ ಬ್ರೇಕ್ ಹಾಕುವುದರ ಬಗ್ಗೆ ಎಲ್ಲ ರಾಜ್ಯಗಳಿಗೂ ಪತ್ರ ಬರೆದು ಅಭಿಪ್ರಾಯ ಸಂಗ್ರಹಿಸಿದೆ.
ಮಾರ್ಕ್ ಸ್ಪೈಕಿಂಗ್ ತಡೆಯಲು ಈಗಾಗಲೇ ದೇಶದ 17 ರಾಜ್ಯಗಳು ಒಪ್ಪಿಗೆ ಸೂಚಿಸಿದ್ದು, ಮಾರ್ಕ್ ಸ್ಪೈಕಿಂಗ್ ಸಂಪೂರ್ಣ ತೆಗೆದು ಹಾಕಲು ತೀರ್ಮಾನ ಕೈಗೂಳ್ಳುವುದಾಗಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್ ಸ್ವರೂಪ್ ಹೇಳಿದ್ದಾರೆ.
ಮಾರ್ಕ್ ಸ್ಪೈಕಿಂಗ್ ನಿಂದ ಫಲಿತಾಂಶದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ತೊಂದರೆಯಾಗುತ್ತದೆ. ಹಾಗಾಗಿ ಇದನ್ನು ತೆಗೆದುಹಾಕಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಇನ್ನು ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಪ್ರಕಟಿಸಿದ ಪಠ್ಯವನ್ನೇ ಬೋಧಿಸುವಂತೆ ತನ್ನ ಅಧೀನದ ಶಾಲೆಗಳಿಗೆ ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಸೂಚಿಸಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ರಾಜ್ಯಸಭೆಗೆ ಗುರುವಾರ ತಿಳಿಸಿದ್ದಾರೆ.