ಕೊರೋನಾ ಸೋಂಕು ಸಮಸ್ಯೆಯಿಂದಾಗಿ 2020-21ನೇ ಸಾಲಿನಲ್ಲಿ ನಿಗದಿಯಂತೆ ಶೈಕ್ಷಣಿಕ ವರ್ಷ ಆರಂಭವಾಗದೆ ನಷ್ಟ ಅನುಭವಿಸುತ್ತಿರುವ ಕಾರಣದಿಂದಾಗಿ ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ಇ) 9 ರಿಂದ 12ನೇ ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ಶೇ. 30ರ ವರೆಗೆ ಕಡಿತಗೊಳಿಸಲು ನಿರ್ಧರಿಸಿದೆ.
ಕೊರೋನಾ ಸಮಸ್ಯೆ ನಡುವೆ ಶಾಲೆಗಳನ್ನು ತೆರೆಯದ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣದ ಕೊರತೆಯ ಹಿನ್ನೆಲೆಯಲ್ಲಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಶೈಕ್ಷಣಿಕ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ 9 ರಿಂದ 12 ನೇ ತರಗತಿಗಳಿಗೆ ಪಠ್ಯಕ್ರಮವನ್ನು ಶೇ.30ರಷ್ಟು ಕಡಿತಗೊಳಿಸಲಾಗುವುದು ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ, ದೈಹಿಕ ಜ್ಞಾನಾರ್ಜನೆಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರವೇ ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ವರ್ಷವನ್ನು ಮುಗಿಸಲು ಪಠ್ಯಕ್ರಮದಲ್ಲಿ ಕಡಿತಗೊಳಿಸಲಾಗಿದೆ ಎಂದು ಸಿಬಿಎಸ್ ಇ ಸ್ಪಷ್ಟಪಡಿಸಿದೆ.
Looking at the extraordinary situation prevailing in the country and the world, #CBSE was advised to revise the curriculum and reduce course load for the students of Class 9th to 12th. @PMOIndia @HMOIndia @PIB_India @MIB_India @DDNewslive @cbseindia29 @mygovindia
— Dr. Ramesh Pokhriyal Nishank (@DrRPNishank) July 7, 2020
ಈ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಎಲ್ಲಾ ಶಿಕ್ಷಣ ತಜ್ಞರಿಂದ ಸಲಹೆಗಳನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಠ್ಯಕ್ರಮದಲ್ಲಿ ಮಾತ್ರವೇ ಕಡಿತಗೊಳಿಸಲಾಗಿದೆ. ಇಂಟರ್ನಲ್ ಮಾರ್ಕ್ಸ್ ಹಾಗೂ ಬೋರ್ಡ್ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇದು ವಿದ್ಯಾರ್ಥಿಗಳು, ಶಿಕ್ಷಕರ ಶೈಕ್ಷಣಿಕ ಕ್ರಮದ ದೃಷ್ಠಿಯಿಂದ ಕೈಗೊಂಡ ಕ್ರಮವಾಗಿದೆ ಎಂದು ಸಿಬಿಎಸ್ ಇ ತಿಳಿಸಿದೆ.