ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಲು ದೆಹಲಿ ಸರ್ಕಾರ ಸೂಚಿಸಿದೆ.

ಕೊರೊನಾ ಭೀತಿಯಿಂದಾಗಿ ಅಂತಿಮ ವರ್ಷದ ಪರೀಕ್ಷೆ ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿ, ಈ ಹಿಂದಿನ ವರ್ಷದ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅಂಕಗಳನ್ನು ನೀಡಿ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದು ಕಷ್ಟ ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಸಚಿವರು ತಿಳಿಸಿದ್ದಾರೆ. ಕೇಂದ್ರದ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿದ್ದಾರೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುಂಚೆ ದೆಹಲಿ ವಿಶ್ವವಿದ್ಯಾಲಯ ಪದವಿಪೂರ್ವ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ಆಗಸ್ಟ್ 15 ರಂದು ನಡೆಸಲು ತೀರ್ಮಾನಿಸಿದ್ದವು. ಈ ನಿರ್ಧಾರ ಪ್ರಕಟಣೆಯಾದ ಎರಡು ದಿನಗಳ ಬಳಿಕ ಪರೀಕ್ಷೆ ರದ್ದು ಮಾಡಲಾಗಿದೆ.
ಇನ್ನು ಕರ್ನಾಟಕದಲ್ಲಿ ಅಂತಿಮ ವರ್ಷದ ಹಾಗೂ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪದವಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಯುಜಿಸಿ ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಅಂತಿಮ ಸೆಮಿಸ್ಟರ್ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲೂ ರಾಜ್ಯ ಸರ್ಕಾರ ನಿರ್ಧರಿಸಿದೆ.


Click it and Unblock the Notifications