ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಂದ ಪಾಠ ಮಾಡಿಸುವ ಮೂಲಕ 'ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್'ನ ಮೊದಲ ಶೈಕ್ಷಣಿಕ ವರ್ಷವನ್ನು ಆರಂಭಿಸಲು ಸಕಲ ಸಿದ್ದತೆ ನಡೆದಿದೆ.
ಬೆಂಗಳೂರು ವಿವಿ ಆವರಣದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭವಾಗಲಿದ್ದು, ಮೊದಲ ತರಗತಿಯನ್ನು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪಾಠ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿಯವರು ತಿಳಿಸಿದ್ದಾರೆ.

1954ರಲ್ಲಿ ಪಂಜಾಬ್ ವಿವಿಯಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಮುಗಿಸಿದ ಸಿಂಗ್, ಬಳಿಕ 1957ರಿಂದ ಅಲ್ಲಿಯೇ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1966ರಲ್ಲಿ ವಿಶ್ವಸಂಸ್ಥೆಯ ಆರ್ಥಿಕ ವ್ಯವಹಾರಗಳ ಅಧಿಕಾರಿಯಾಗಿ ನೇಮಕಗೊಂಡ ಬಳಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೃತ್ತಿಯಿಂದ ದೂರ ಉಳಿದರು.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಏಪ್ರಿಲ್ 14ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸಿದ್ದರು.
ದೇಶದ ಶ್ರೇಷ್ಠ ಅರ್ಥಶಾಸ್ತ್ರತಜ್ಞ ಹಾಗೂ ರಾಷ್ಟ್ರ ನಾಯಕ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಬೇಸ್ ಎಂಬ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಿದೆ.
ಸಂಸ್ಥೆಯ ವೈಶಿಷ್ಟ್ಯ ಮತ್ತು ಸೌಲಭ್ಯಗಳು
ಬೇಸ್ ಅನ್ನು ಶ್ರೇಷ್ಠ ಶೈಕ್ಷಣಿಕ ಸಂಸ್ಥೆಯಾಗಿ ರೂಪಿಸಲು ಹಾಗೂ ವಿಶ್ವದರ್ಜೆಯ ಸಂಸ್ಥೆಗಳ ಬೋಧನಾ ಗುಣಮಟ್ಟವನ್ನು ಖಾತರಿಪಡಿಸುವ ಸಲುವಾಗಿ, ದೇಶ ಹಾಗೂ ವಿದೇಶಗಳ ಉತ್ತಮ ಪ್ರಾಧ್ಯಾಪಕರುಗಳನ್ನು ಆಹ್ವಾನಿಸಿ ಸಂಸ್ಥೆಯಲ್ಲಿ ಬೋಧಿಸಲು ಉದ್ದೇಶಿಸಿದೆ.
ಬೇಸ್ ಒಂದು ಸಂಪೂರ್ಣ ವಸತಿ ಶಿಕ್ಷಣ ಸಂಸ್ಥೆಯಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಕಡ್ಡಾಯವಾಗಿ ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿನಿಲಯದಲ್ಲೇ ನೆಲಸಬೇಕಾಗಿದೆ. ಆರಂಭಿಕವಾಗಿ 2017-18ರ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ (ಆನರ್ಸ್) ಅರ್ಥಶಾಸ್ತ್ರ ಕೋರ್ಸ್ ಪ್ರಾರಂಭಿಸಲಾಗಿದೆ.
ಎಕನಾಮಿಕ್ಸ್ ಕೋರ್ಸ್‌ನ ಮೊದಲ ವರ್ಷದ 50 ವಿದ್ಯಾರ್ಥಿಗಳನ್ನು ಒಳಗೊಂಡ ತರಗತಿಗೆ ಚಾಲನೆ ನೀಡಲಾಗುತ್ತದೆ. ಮುಂದಿನ ವರ್ಷದ ವೇಳೆಗೆ ಇನ್ನಷ್ಟು ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದ್ದು,ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರಕ್ಕೆ ಏರಲಿದೆ ಎಂದು ಹೇಳಿದರು. ಪ್ರಸಕ್ತ ಸಾಲಿನಲ್ಲಿ 50 ವಿದ್ಯಾರ್ಥಿಗಳಿಗೆ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ.
ಲಿಖಿತ ಪರೀಕ್ಷೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದ್ದು, 259 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆ. 17ರಂದು ಆಯ್ಕೆ ಪ್ರಕ್ರಿಯೆ ಕೌನ್ಸಲಿಂಗ್ ನಡೆಯಲಿದೆ. ಪರಿಶಿಷ್ಟ ಜಾತಿಗೆ ಶೇ. 20, ಪಂಗಡಕ್ಕೆ ಶೇ. 10ರಷ್ಟು ಮೀಸಲಾತಿ ನೀಡುತ್ತಿದ್ದು, ಶೇ. 60ರಷ್ಟು ಸೀಟುಗಳನ್ನು ರಾಜ್ಯದ ಮತ್ತು ಉಳಿದ ಸೀಟುಗಳನ್ನು ಹೊರರಾಜ್ಯದ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುತ್ತದೆ.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಜತೆ ಒಪ್ಪಂದ ಮಾಡಿಕೊಳ್ಳಲಾಗವುದು. ಪ್ರಾಧ್ಯಾಪಕರ ನೇಮಕಾತಿಗೆ ಡಾ.ಕಸ್ತೂರಿರಂಗನ್ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


Click it and Unblock the Notifications











