ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಸೋಂಕಿನಿಂದಾಗಿ ಲಾಕ್‌ಡೌನ್ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈಗ ಜೂನ್ 18ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮತ್ತು ಜೂನ್ 25 ರಿಂದ ಜುಲೈ 4ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕ ನಿಗದಿಯಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಿಎಂಟಿಸಿ ವ್ಯವಸ್ಥೆ ಕಲ್ಪಿಸುವುದಾಗಿ ಸಾರಿಗೆ ಇಲಾಖೆ ತಿಳಿಸಿದೆ.

ಮಾರ್ಚ್ 4 ರಿಂದ ಮಾರ್ಚ್ 23ರ ವರೆಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಮತ್ತು ಮಾರ್ಚ್ 27 ರಿಂದ ಏಪ್ರಿಲ್ 9ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಿಗದಿಯಾಗಿತ್ತು. ನಂತರ ಕೊರೊನಾ ವೈರಸ್ ಲಾಕ್‌ಡೌನ್ ಘೋಷಣೆ ಆದ ಹಿನ್ನೆಲೆಯಲ್ಲಿ ಇಂಗ್ಲಿಷ್ ಪರೀಕ್ಷೆ ಮಾತ್ರ ಬಾಕಿ ಉಳಿದುಕೊಂಡಿತ್ತು. ಇದೀಗ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಬಿಎಂಟಿಸಿ ಈ ವ್ಯವಸ್ಥೆ ಮಾಡಿದೆ.
ಪರೀಕ್ಷಾ ದಿನ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೂ ಹೋಗುವಾಗ ಮತ್ತು ಬರುವಾಗ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವ ವೇಳೆ ಪರೀಕ್ಷಾ ಪ್ರವೇಶ ಪತ್ರ ಅಥವಾ ಐಡಿ ತೋರಿಸಿ ಪ್ರಯಾಣಿಸಬಹುದು ಎಂದು ಹೇಳಿದೆ.
ಈ ಕುರಿತು ಬಿಎಂಟಿಸಿ ಬಸ್ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಘಟಕಗಳ ಸೂಚನಾ ಫಲಕದಲ್ಲಿ ಪ್ರಕಟಿಸಲು ವಿಭಾಗಿಯ ನಿಯಂತ್ರಣಾಅಧಿಕಾರಿಗಳು ಹಾಗು ವ್ಯವಸ್ಥಾಪಕರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಆಡಳಿತ ಮಂಡಳಿ ಸೂಚಿಸಿದೆ.


Click it and Unblock the Notifications











