
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜನವರಿ 31ರವರೆಗೆ ಶಾಲೆಗಳಿಗೆ ರಜೆ ವಿಸ್ತರಿಸುವುದಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಈ ಮುಂಚೆ ಜನವರಿ 19ರವರೆಗೆ ಮಾತ್ರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣವು ಶೇ 5ಕ್ಕಿಂತ ಹೆಚ್ಚಾದರೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಜ.31ರವರೆಗೆ 1 ರಿಂದ 9ನೇ ತರಗತಿವರೆಗೆ ರಜೆ ಘೋಷಿಸಲಾಗಿದೆ. ಪ್ರಸ್ತುತ 10, 11 ಮತ್ತು 12ನೇ ತರಗತಿ ಮತ್ತು ಪ್ಯಾರಾಮೆಡಿಕಲ್ ಮತ್ತು ವೈದ್ಯಕೀಯ ಕೋರ್ಸ್ ಗಳ ತರಗತಿಗಳು ನಡೆಯುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿನ ಪರಿಸ್ಥಿತಿ ನೋಡಿಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಈಗ ಬೆಂಗಳೂರು, ಮೈಸೂರು, ಬೆಳಗಾವಿ ಬಿಟ್ಟು ಬೇರೆಲ್ಲೂ ಆತಂಕವಿಲ್ಲ ಆದರೆ ಬೆಂಗಳೂರು ನಗರದಲ್ಲಿ ಸೋಂಕಿನ ತೀವ್ರತೆ ಆಧರಿಸಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.


Click it and Unblock the Notifications











