ಭಾರತೀಯ ರೈಲ್ವೆ ಇಲಾಖೆಯ ಸುರಕ್ಷತಾ ವಿಭಾಗಕ್ಕೆ ಸುಮಾರು 1 ಲಕ್ಷ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇತ್ತೀಚೆಗೆ, ರೈಲು ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ಈ ಮಹತ್ವದ ನಿರ್ಧಾರಕ್ಕೆ ರೈಲ್ವೆ ಇಲಾಖೆ ಬಂದಿದೆ.

ಲೋಕೋ ಪೈಲಟ್, ರೈಲು ಚಾಲಕರು, ನಿಯಂತ್ರಣ ಹಾಗೂ ಯಾರ್ಡ್ ಸಿಬ್ಬಂದಿ, ತಾಂತ್ರಿಕ ಮೇಲ್ವಿಚಾರಕರು, ಸ್ಟೇಷನ್ ಮಾಸ್ಟರ್, ಭದ್ರತಾ ಸಿಬ್ಬಂದಿ, ಸಿಗ್ನಲ್ ಇನ್ಸ್ ಪೆಕ್ಟರ್ ಹಾಗೂ ನಿರ್ವಹಣಾ ಸಿಬ್ಬಂದಿ ಸೇರಿದಂತೆ ಖಾಲಿ ಇರುವ ಲಕ್ಷದಷ್ಟು ಉದ್ಯೋಗಗಳನ್ನು ತುಂಬಲು ನಿರ್ಧರಿಸಲಾಗಿದೆ.
ರೈಲ್ವೆ ಸುರಕ್ಷತಾ ವಿಭಾಗದಡಿ ಖಾಲಿ ಇರುವ ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಬಹು ದಿನಗಳಿಂದಲೂ ಬೇಡಿಕೆಯಿತ್ತು. ಆದರೆ, ಇದಕ್ಕೆ ಕಾಲ ಕೂಡಿಬಂದಿರಲಿಲ್ಲ. ಈಗ ಈ ಪ್ರಕ್ರಿಯೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ ಎನ್ನಲಾಗಿದೆ.
1960ರಿಂದ 2016ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 13,929 ರೈಲುಗಳು ಅಪಘಾತಕ್ಕೀಡಾಗಿವೆ. ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಅತಿ ಹೆಚ್ಚು ಅಪಘಾತಗಳು ಚಾಲಕರ ಅಥವಾ ಇತರ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಆಗುತ್ತಿವೆ ಎಂದು ಅಪಘಾತಗಳ ತನಿಖಾ ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ, ರೈಲ್ವೆ ಸುರಕ್ಷಾ ವಿಭಾಗಕ್ಕೆ ಹೊಸ ಕಾಯಕಲ್ಪ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.
2015ರಲ್ಲಿ ರೈಲ್ವೆ ಇಲಾಖೆಯ ಸುರಕ್ಷಾ ವಿಭಾಗದಲ್ಲಿ 1,24,201 ಉದ್ಯೋಗಗಳು ಖಾಲಿ ಇದ್ದವು. ಇವುಗಳಲ್ಲಿ ಕೆಲವಾರು ಹುದ್ದೆಗಳನ್ನು ಮಾತ್ರ ತುಂಬಲಾಗಿದ್ದು, 2016ರಲ್ಲಿ 1,22,763 ಹುದ್ದೆಗಳು ಖಾಲಿ ಇವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇವುಗಳಲ್ಲಿ ಒಂದು ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಶೀಘ್ರವೇ ಇದರ ಅಧಿಸೂಚನೆ ಬರಲಿದೆ ಎಂದು ಮೂಲಗಳು ತಿಳಿಸಿವೆ


Click it and Unblock the Notifications











