ಸಾಕ್ಷರತೆಯ ಮಹತ್ವವನ್ನು ಜನರಿಗೆ ನೆನಪಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ.ವಿಶ್ವದಲ್ಲಿನ ಸಾಕ್ಷರತೆಯ ಗುಣಮಟ್ಟದಲ್ಲಿ ಸುಧಾರಣೆಯನ್ನು ತೋರಿಸುವ ಹಿನ್ನೆಲೆಯಲ್ಲಿ ಯುನೆಸ್ಕೋ ಈ ದಿನವನ್ನು ಸಾಕ್ಷರತಾ ದಿನವನ್ನಾಗಿ ಘೋಷಿಸಿತು.

ಸಾಕ್ಷರತಾ ದಿನದ ಇತಿಹಾಸ:
1965 ನವೆಂಬರ್ 17 ರಲ್ಲಿ ಯುನೆಸ್ಕೋ ಸೆಪ್ಟೆಂಬರ್ 8 ಅನ್ನು ವಿಶ್ವ ಸಾಕ್ಷರತಾ ದಿನವನ್ನಾಗಿ ಘೋಷಿಸಿತು. 1965 ರಲ್ಲಿ ಇರಾನಿನಲ್ಲಿ ನಡೆದ ವಿಶ್ವ ಸಂಸ್ಥೆಯ ಸಭೆಯಲ್ಲಿ ಜಗತ್ತಿನಲ್ಲಿ ಅನಕ್ಷರತೆಯನ್ನು ಇನ್ನಿಲ್ಲದಂತೆ ಮಾಡಬೇಕು ಎಂಬ ನಿರ್ಧಾರ ಕೈಗೊಂಡು ಸಾಕ್ಷರತಾ ದಿನವನ್ನು ಜಾರಿಗೆ ತರಲಾಯಿತು.

ಸಾಕ್ಷರತಾ ದಿನದ 2020ರ ಥೀಮ್ ಏನು:
ವಿಶ್ವಸಂಸ್ಥೆಯ ಪ್ರಕಾರ, ಅಂತರರಾಷ್ಟ್ರೀಯ ಸಾಕ್ಷರತಾ ದಿನ 2020 ರ ಥೀಮ್ ಏನೆಂದರೆ "COVID-19 ಬಿಕ್ಕಟ್ಟಿನಲ್ಲಿ ಮತ್ತು ಅದಕ್ಕೂ ಮೀರಿದ ಸಂದರ್ಭದಲ್ಲಿ ಸಾಕ್ಷರತೆ ಬೋಧನೆ ಮತ್ತು ಕಲಿಕೆಯ ಮಹತ್ವ". ಯುವಕರ ಭವಿಷ್ಯಕ್ಕೆ ಪ್ರೇರಕವಾಗಲೆಂಬ ಉದ್ದೇಶದಿಂದ ಈ ಥೀಮ್ ಅನ್ನು ಹೊಂದಿದೆ.
COVID-19 ಸಂಕಷ್ಟದ ಸಮಯದಲ್ಲಿ ಅನೇಕ ದೇಶಗಳಲ್ಲಿ ಪ್ರಸಕ್ತ ಶೈಕ್ಷಣಿಯ ವರ್ಷ ಇನ್ನೂ ಆರಂಭಗೊಂಡಿಲ್ಲ ಹೀಗಾಗಿ ಶೈಕ್ಷಣಿಕ ಸಾಲಿಗೆ ಅಪಾರ ನಷ್ಟ ಉಂಟಾಗಿದೆ. ಹೀಗಾಗಿ ಅನೇಕ ದೇಶಗಳು ಅನೇಕ ಕೋರ್ಸ್ ಗಳನ್ನು ರದ್ದುಪಡಿಸಿವೆ. ಇನ್ನೂ ಕೆಲವು ದೇಶಗಳಲ್ಲಿ ಆನ್‌ಲೈನ್ ಮೂಲಕವೇ ತರಗತಿಗಳು ನಡೆಯುತ್ತಿವೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ನಾವು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಏಕೆ ಆಚರಿಸುತ್ತೇವೆ?:
ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ ಇದರಿಂದ ಜಗತ್ತಿನಾದ್ಯಂತದ ಜನರು ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳನ್ನು ತಿಳಿದುಕೊಳ್ಳಬಹುದು. ಸಾಕ್ಷರತೆಯನ್ನು ಸಾಮಾಜಿಕ ಮತ್ತು ವೈಯಕ್ತಿಕ ಅಭಿವೃದ್ಧಿಯ ಅವಶ್ಯಕತೆ ಎಂದು ಪರಿಗಣಿಸಲಾಗಿದೆ.
ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕವಾಗಿ, ಕನಿಷ್ಠ 773 ಮಿಲಿಯನ್ ವಯಸ್ಕರು ಮತ್ತು ಯುವಕರು ಇನ್ನೂ ಓದಲು ಮತ್ತು ಬರೆಯಲು ಸಾಧ್ಯವಿಲ್ಲ ಅದಲ್ಲದೇ 617 ಮಿಲಿಯನ್ ಮಕ್ಕಳು ಮತ್ತು ಹದಿಹರೆಯದವರು ಓದುವಿಕೆ ಮತ್ತು ಗಣಿತಶಾಸ್ತ್ರದಲ್ಲಿ ಕನಿಷ್ಠ ಪ್ರಾವೀಣ್ಯತೆಯನ್ನು ಹೊಂದಿಲ್ಲ ಎಂದು ತಿಳಿಸಿದೆ.