
ರಾಜ್ಯದಲ್ಲಿ ಇಂದಿನಿಂದ ಪದವಿ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಪುನರಾರಂಭವಾಗಲಿವೆ. ಕನಿಷ್ಟ ಒಂದು ಡೋಸೇಜ್ ಕೋವಿಡ್ ಲಸಿಕೆಯನ್ನು ಪಡೆದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ.
ತರಗತಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿಯೇ ಲಸಿಕಾ ಪ್ರಮಾಣಪತ್ರವನ್ನು ಪರಿಶೀಲಿಸಿಕೊಂಡು ನಂತರ ತರಗತಿಗಳನ್ನು ಪ್ರವೇಶಿಸಬೇಕಿರುತ್ತದೆ. ಜೊತೆಗೆ ವಿದ್ಯಾರ್ಥಿಗಳು ಪೋಷಕರ ಅನುಮತಿಯ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಿದೆ.
ಯುಜಿಸಿ ಹೊರಡಿಸಿರುವ ಮಾರ್ಗಸೂಚಿ ಅನುಸಾರ ಎಲ್ಲಾ ಕಾಲೇಜುಗಳು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಈ ಬಗ್ಗೆ ಉಪಮುಖ್ಯ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ. ಡಾ. ಸಿ.ಎನ್ ಅಶ್ವತ್ಥನಾರಾಯಣ ಈಗಾಗಲೇ ಅದೇಶ ಹೊರಡಿಸಿದ್ದಾರೆ.
ತರಗತಿಯಲ್ಲಿ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಹಾಗಾಗಿ ಶೈಕ್ಷಣಿಕ ಸಂಸ್ಥೆಗಳು ಈ ಬಗ್ಗೆ ಹೆಚ್ಚು ಗಮನವಹಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ತರಗತಿಗೆ ಹಾಜರಾಗುವ ಅಥವಾ ಆನ್‌ಲೈನ್ ಮೂಲಕ ಕಲಿಯುವ ಆಯ್ಕೆ ವಿದ್ಯಾರ್ಥಿಗಳಿಗೇ ಬಿಡಲಾಗಿದೆ. ಆದರೆ ಯಾವುದಾದರೂ ಒಂದರ ಮೂಲಕ ಹಾಜರಾತಿ ಕಡ್ಡಾಯ ಎಂದು ಹೇಳಿದ್ದಾರೆ.
ಈಗಾಗಲೇ ವಿಶ್ವವಿದ್ಯಾಲಯಗಳಲ್ಲಿ 18 ವರ್ಷ ಮೇಲ್ಪಟ್ಟ ಶೇ.74% ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗಿದ್ದು, ಇನ್ನುಳಿದ ವಿದ್ಯಾರ್ಥಿಗಳಿಗೆ ಅತೀ ಶೀಘ್ರವೇ ಲಸಿಕೆಯನ್ನು ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.


Click it and Unblock the Notifications











