
ರಾಜ್ಯದಲ್ಲಿ ಕೊರೊನಾ ಅಬ್ಬರ ನಡುವೆ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಪೆಟ್ಟು ಬಿದ್ದಿರುವುದು ನಮಗೆಲ್ಲಾ ಗೊತ್ತಿರುವ ಸಂಗತಿ. ಹಾಗೆಯೇ ಕೊರೊನಾ, ಲಾಕ್‌ಡೌನ್ ಅಂತೆಲ್ಲಾ ಜನಜೀವನ ಕೂಡ ತೀರಾ ಹದಗೆಟ್ಟಿದೆ. ಹೀಗಿರುವಾಗ ವಿದ್ಯಾರ್ಥಿಗಳ ಶಿಕ್ಷಣದ ಕಲಿಕೆ ಬಗ್ಗೆ ಪೋಷಕರು ಕೂಡ ಚಿಂತಿಸುವಂತಾಗಿದೆ. ಖಾಸಗಿ ಶಾಲೆಗಳ ಶುಲ್ಕ ಪಾವತಿಯ ಪೇಚಾಟದಿಂದಾಗಿ ಸರ್ಕಾರಿ ಶಾಲೆಗಳ ಕದ ತಟ್ಟಲು ಪೋಷಕರು ಮುಂದಾಗಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಮಹತ್ತರ ಯೋಜನೆಗೆ ಸಿದ್ಧತೆ ನಡೆಸುತ್ತಿದೆ.
ಹೌದು ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಅವರ ಊರುಗಳಿಗೆ ತೆರಳಿ ಜೀವನ ನಡೆಸುತ್ತಿದ್ದಾರೆ. ಆರೋಗ್ಯ ಕಾಳಜಿ ಮತ್ತು ಜೀವನ ನಿರ್ವಹಣೆಗೆ ದಾರಿ ಹುಡುಕುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದಾರೆ. ಹಾಗಾಗಿ ಕರ್ನಾಟಕ ಶಿಕ್ಷಣ ಇಲಾಖೆ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಸುಮಾರು 1,000 ಆಂಗ್ಲ ಮಾಧ್ಯಮ ಶಾಲೆಗಳನ್ನು ಹೊಸದಾಗಿ ಆರಂಭಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಗೆ ಅನುಮೋದನೆ ದೊರೆತರೆ ಶೀಘ್ರದಲ್ಲಿಯೇ ಇನ್ನಷ್ಟು ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ತಲೆ ಎತ್ತಲಿವೆ.


Click it and Unblock the Notifications











