ರಾಜ್ಯದಾದ್ಯಂತ ಶಾಲಾ ಕಾಲೇಜುಗಳು ಮತ್ತೆ ಪುನರಾರಂಭವಾಗಲಿವೆ ಆದರೆ ಬೆಂಗಳೂರಿನಲ್ಲಿ ಮಾತ್ರ ಶಾಲೆ ಕಾಲೇಜುಗಳಿಗೆ ಸದ್ಯಕ್ಕೆ ಬಂದ್ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ನಂತರ ಮಾತನಾಡಿದ ಶಿಕ್ಷಣ ಸಚಿವ ನಾಗೇಶ್, ಬೆಂಗಳೂರಿನಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನವರಿ 29ರವರೆಗೂ ಶಾಲೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆಯಲು ಅನುಮತಿಸಲಾಗಿದೆ ಎಂದರು.
ಕೋವಿಡ್ ಪರಿಸ್ಥಿತಿ ಕುರಿತು ಜಿಲ್ಲಾವಾರು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು. ಮಕ್ಕಳಲ್ಲಿ ಕೊವಿಡ್-19 ಸೋಂಕಿನ ಪಾಸಿಟಿವಿಟಿ ದರವು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಶಾಲೆಗಳನ್ನು ಮತ್ತೆ ತೆರೆಯುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಶಾಲೆಗಳಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ವರದಿಯಾದರೆ 3 ರಿಂದ 7 ದಿನಗಳವರೆಗೆ ಶಾಲೆಗಳನ್ನು ಬಂದ್ ಮಾಡಿ, ತದನಂತರ ಪುನಾರಂಭಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಜನವರಿ ೨೯ರ ವರೆಗೆ ಶಾಲೆಗಳನ್ನು ಮುಚ್ಚುವ ನಿರ್ಧಾರ ಮುಂದುವರೆಯಲಿದೆ. ಮುಂದಿನ ಶುಕ್ರವಾರ ಮತ್ತೆ ಸಭೆ ನಡೆಸಿ ಬೆಂಗಳೂರು ಶಾಲೆಗಳನ್ನು ತೆರೆಯುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಕ್ಕಳಲ್ಲಿ ಕೋವಿಡ್ ಪಾಸಿಟಿವಿಟಿ ದರ:
ರಾಜ್ಯದಲ್ಲಿ 5 ರಿಂದ 12 ವರ್ಷ ವಯೋಮಾನದ 5.33,144 ಮಕ್ಕಳನ್ನು ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವಿಟಿ ದರ ಶೇ.5.94ರಷ್ಟು ಇರುವುದು ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ ಈ ವಯೋಮಾನದ ಮಕ್ಕಳ ಕೊರೊನಾವೈರಸ್ ಪಾಸಿಟಿವಿಟಿ ದರವು ಶೇ.14.12ರಷ್ಟಿದೆ. ಮೈಸೂರು, ತುಮಕೂರು, ಹಾಸನ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ದರ ಶೇ.9ಕ್ಕಿಂತ ಹೆಚ್ಚಾಗಿದೆ. ಉಳಿದಂತೆ 13 ಜಿಲ್ಲೆಗಳಲ್ಲಿ ಸೋಂಕಿನ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾಗಿದೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ. -
ಪಾಸಿಟಿವಿಟಿ ದರ ಹೆಚ್ಚಿದ್ದಂತಹ ಸಾಲ್ಕೈದು ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲು ನಿರ್ಬಂಧವಿತ್ತು. ಆದರೆ ಅಲ್ಲಿಯೂ ಕೂಡ ಪರಿಸ್ಥಿತಿಯನ್ನು ಅವಲಕೋಕಿಸಿಕೊಂಡು ಶಾಲೆಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದಿದ್ದಾರೆ.

ಎಸ್ಎಸ್ಎಲ್ಸಿ ಮತ್ತು ಪಿಯುಸಿ ವೇಳಾಪಟ್ಟಿ ಪ್ರಕಟ :
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಈಗಾಗಲೇ ಪ್ರಕಟಿಸಲಾಗಿದೆ. ಕೋವಿಡ್ ಪರಿಸ್ಥಿತಿಗಳನ್ನು ನೋಡಿಕೊಂಡು ನಿಗದಿತ ದಿನಾಂಕಗಳಂದು ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ವರ್ಷದಿಂದ ಸುಗಮವಾಗಿ ತರಗತಿಗಳು ನಡೆಯುತ್ತವೆ ಎಂದು ಸಚಿವರು ನಿನ್ನೆ ಹೇಳಿದ್ದರು.