
ರಾಜ್ಯದಲ್ಲಿ ಕುತೂಹಲ ಮೂಡಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ದೇಶದೆಲ್ಲೆಡೆ ಕೋವಿಡ್ ನಿಂದಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಸಿಬಿಎಸ್ಇ ಪರೀಕ್ಷೆ ರದ್ದಾದ ನಂತರ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಬೋರ್ಡ್‌ಗಳು ಸಹ 12ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿವೆ. ಅದೇ ರೀತಿಯಾಗಿ ಕರ್ನಾಟಕದಲ್ಲೂ ಪರೀಕ್ಷೆ ರದ್ದುಗೊಳಿಸುವಂತೆ ಅನೇಕರ ಕೂಗು ಕೇಳಿಬಂದಿದ್ದು, ಇದೀಗ ಸಚಿವರು ತಮ್ಮ ನಿಲುವನ್ನು ಘೋಷಿಸಿದ್ದಾರೆ.
ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆಯೋ ಅಥವಾ ಇಲ್ಲವೋ ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಗ್ರೇಡ್ ನೀಡುವುದಾಗಿ ತಿಳಿಸಿದ್ದಾರೆ.


Click it and Unblock the Notifications











