
ಸಿಬಿಎಸ್ಇ ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿರುವ ಕಾರಣದಿಂದಾಗಿ ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಗಳು ರದ್ದಾಗಲಿವೆಯೇ ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬುರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮಂಡಳಿಯು ತೆಗೆದುಕೊಂಡಿರುವ ನಿರ್ಧಾರವನ್ನು ಅನುಕರಿಸುವಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ.
ಈ ಒತ್ತಡಕ್ಕೆ ಮಣಿದ ಕರ್ನಾಟಕ ಸರ್ಕಾರವು ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 'ಒಂದು ದಿನದ' ಪರೀಕ್ಷೆಯನ್ನು ನಡೆಸಲು ಚಿಂತಿಸುತ್ತಿದೆ. ರಾಜ್ಯ ಸರ್ಕಾರವು ಪರೀಕ್ಷೆಯನ್ನು ಜುಲೈ ಅಂತ್ಯದಲ್ಲಿ ಅಥವಾ 2021ರ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಪರೀಕ್ಷೆಯನ್ನು ನಡೆಸುವ ಸಾಧ್ಯತೆಯ ಬಗ್ಗೆ ಚರ್ಚಿಸುತ್ತಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹಲವಾರು ಉದ್ಯೋಗಗಳಿಗೆ ಪಿಯುಸಿ ವಿದ್ಯಾರ್ಹತೆ ಅವಶ್ಯಕವಾಗಿದೆ. ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪಿಯುಸಿ ಪರೀಕ್ಷೆಯನ್ನು ದೂರವಿಡುವ ಪ್ರಶ್ನೆಯೇ ಇಲ್ಲ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಪರೀಕ್ಷೆ ನಡೆಸುವ ಕುರಿತು " ವಿದ್ಯಾರ್ಥಿಗಳಿಗೆ ಯಾವುದೇ ಮೂರು ವಿಷಯಗಳ ಆಯ್ಕೆಯನ್ನು ನೀಡುವ ಮೂಲಕ ಒಂದು ದಿನದ ಪರೀಕ್ಷೆಯನ್ನು ನಡೆಸಲು ನಾವು ತಾತ್ಕಾಲಿಕವಾಗಿ ಯೋಜಿಸುತ್ತಿದ್ದೇವೆ. ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಗಳ ರೂಪದಲ್ಲಿರುತ್ತದೆ, ಇದನ್ನು ಕಡಿಮೆ ಅವಧಿಯಲ್ಲಿ ಎರಡು ಸೆಷನ್ ನಲ್ಲಿ ನಡೆಸಲಾಗುವುದು" ಎಂದು ಚರ್ಚಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚರ್ಚೆಯ ಪ್ರಕಾರ ಕರ್ನಾಟಕದಾದ್ಯಂತ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಪರೀಕ್ಷೆಯನ್ನು ಜುಲೈ ಕೊನೆಯ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಡೆಸಬಹುದು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಬುಧವಾರ ಎಲ್ಲಾ ಉಪ ನಿರ್ದೇಶಕರೊಂದಿಗೆ ವಾಸ್ತವ ಸಭೆ ನಡೆಸಿ ಪರೀಕ್ಷೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.


Click it and Unblock the Notifications











