ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಮುಂದೂಡಬೇಕು ಎಂದು ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಹೈ ಕೋರ್ಟ್ ತಿರಸ್ಕರಿಸಿದೆ. ಈಗಾಗಲೇ ನಿಗದಿಯಾಗಿರುವಂತೆ ಜುಲೈ 30 ಮತ್ತು 31ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ.

ರಾಜ್ಯದಲ್ಲಿ ಒಟ್ಟು 1,94,356 ವಿದ್ಯಾರ್ಥಿಗಳು 120 ಸ್ಥಳಗಳ 497 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಬೆಂಗಳೂರು ಮಹಾನಗರದಲ್ಲಿ 83 ಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು, 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 30 ಮಂದಿ ವಿದೇಶಿಯರೂ ಇದ್ದಾರೆ. ಪರೀಕ್ಷೆಯು ಬೆಳಗ್ಗೆ 10.30ರಿಂದ 11.50 ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ 3.30 ಗಂಟೆಯವರೆಗೆ ನಡೆಯಲಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ಪೀಠ, ಕೋವಿಡ್ ಸೋಂಕಿತ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಜೊತೆಗೆ ಕಂಟೈನ್‌ಮೆಂಟ್ ವಲಯದ ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಗೆ ತೆರಳಲು ಅವಕಾಶ ಕಲ್ಪಿಸಬೇಕು. ಯಾವೊಬ್ಬ ವಿದ್ಯಾರ್ಥಿಯೂ ಅವಕಾಶವಂಚಿತರಾಗಬಾರದು ಎಂದು ಆದೇಶಿಸಿದೆ.
ರಾಜ್ಯ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ಅವರು, ರಾಜ್ಯದಲ್ಲಿ ನಿಗದಿಯಂತೆ ನಾಳೆ ಮತ್ತು ನಾಡಿದ್ದು ಸಿಇಟಿ ಪರೀಕ್ಷೆ ನಡೆಯಲಿದೆ. ಕಂಟೈನ್ಮೆಂಟ್ ಝೋನ್ ನಲ್ಲಿನ ವಿದ್ಯಾರ್ಥಿಗಳಿಗೂ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಹೊರ ರಾಜ್ಯದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಹೊರರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.


Click it and Unblock the Notifications











