ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಈಗಾಗಲೇ ಪ್ರಕಟ ಮಾಡಲಾಗಿದ್ದು, ಫಲಿತಾಂಶ ತಿರಸ್ಕರಿಸಿದ 878 ವಿದ್ಯಾರ್ಥಿಗಳಿಗೆ ಆಗಸ್ಟ್ 19ರಂದು ಪರೀಕ್ಷೆಯನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರಸಕ್ತ ಸಾಲಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು. ವಿದ್ಯಾರ್ಥಿಗಳ ಫಲಿತಾಂಶವನ್ನು ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯು ಅಂಕಗಳನ್ನು ಪರಿಗಣಿಸಿ ಜು.20ರಂದು ಪ್ರಕಟ ಮಾಡಲಾಗಿತ್ತು. ಒಂದು ವೇಳೆ ವಿದ್ಯಾರ್ಥಿಗಳು ಫಲಿತಾಂಶದಿಂದ ತೃಪ್ತಿಹೊಂದದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಬರುವ ದಿನಗಳಲ್ಲಿ ಪರೀಕ್ಷೆಯನ್ನು ನೀಡುವುದಾಗಿ ತಿಳಿಸಿತ್ತು. ಹಾಗೆಯೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಒಂದುವೇಳೆ ಕಡಿಮೆ ಅಂಕಗಳನ್ನು ಪಡೆದಲ್ಲಿ ಹಿಂದಿನ ಫಲಿತಾಂಶವನ್ನು ನೀಡಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿತ್ತು. ಅದರಂತೆಯೇ ಇದೀಗ ರಾಜ್ಯದಲ್ಲಿ ಒಟ್ಟಾರೆ 878 ವಿದ್ಯಾರ್ಥಿಗಳು ಫಲಿತಾಂಶವನ್ನು ತಿರಸ್ಕರಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಗಸ್ಟ್ ೧೯ರಂದು ಪರೀಕ್ಷೆಯನ್ನು ನಡೆಸಲು ಬೋರ್ಡ್ ನಿರ್ಧರಿಸಿದೆ.
ಈ ಭಾರಿ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಾಲಾಗಿತ್ತು. ಅದರಲ್ಲಿ 878 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ. ರಾಜ್ಯದ ಬಳ್ಳಾರಿ ಜಿಲ್ಲೆಯೊಂದರಲ್ಲೇ 221 ವಿದ್ಯಾರ್ಥಿಗಳು ಪಿಯು ಫಲಿತಾಂಶವವನ್ನು ತಿರಸ್ಕಾರ ಮಾಡಿದ್ದು, ಜಿಲ್ಲೆಯ 221 ಫ್ರೆಶರ್ ಹಾಗೂ 16 ರಿಪೀಟರ್ಸ್ ವಿದ್ಯಾರ್ಥಿಗಳು ಪಿಯು ಫಲಿತಾಂಶವನ್ನು ತಿರಸ್ಕರಿಸಿದ್ದಾರೆ.
ಫಲಿತಾಂಶ ತಿರಸ್ಕಾರ ಯಾಕೆ?:
ಪದವಿ ಪೂರ್ವ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಿದೆ. ಆದರೆ ಅಲ್ಲಿ ನಮ್ಮ ಅಂಕಗಳು ಕಡಿಮೆ ಇವೆ ಹೀಗಾಗಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಫಲಿತಾಂಶ ತಿರಸ್ಕರಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.


Click it and Unblock the Notifications











