
ಕರ್ನಾಟಕ ಮೂಲದ ಯುವತಿ ಆಶ್ರಿತಾ ವಿ ಒಲೆಟಿ ಈಗ ಭಾರತ ವಾಯು ದಳದ ಮೊಟ್ಟ ಮೊದಲ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಯುವತಿ ಆಶ್ರಿತಾ ವಿ ಒಲೆಟಿ ಅವರು ಇಡೀ ಪ್ರಪಂಚದಲ್ಲಿರುವ ಏಳು ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಪ್ರತಿಷ್ಠಿತ ಏರ್‌ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್ ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ ಕೇವಲ 275 ಪದವೀಧರರು ಮಾತ್ರ ಈ ಕೋರ್ಸ್ ಅನ್ನು ಪೂರ್ಣಗೊಳಿಸಿರುತ್ತಾರೆ. ಅತ್ಯಂತ ಕಠಿಣ ತರಬೇತಿಗಳನ್ನು ಒಳಗೊಂಡಿರುವ ಈ ಕೋರ್ಸ್ ಅನ್ನು ಆಶ್ರಿತಾ ಒಲೆಟಿಯವರು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಭಾರತೀಯ ವಾಯುದಳದ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಸ್ಕ್ವಾಡ್ರನ್ ಲೀಡರ್ ಆಶ್ರಿತಾ ವಿ ಒಲೆಟಿ ಫ್ಲೈಟ್ ಟೆಸ್ಟ್ ಎಂಜಿನಿಯರ್ ಆಗಿ ಅರ್ಹತೆ ಪಡೆದ ಮೊದಲ ಮತ್ತು ಏಕೈಕ ಮಹಿಳೆಯಾಗಿದ್ದಾರೆ. ಅವರು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳ್ಳುವ ಮೊದಲು ವಿಮಾನ ಮತ್ತು ವಾಯುಗಾಮಿ ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಲ್ಲಿ ಮಿಲಿಟರಿಯಲ್ಲಿನ ಮಹಿಳೆಯರ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಸೈನ್ಯ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಒಟ್ಟು 9,118 ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಈ ಸೇವೆಗಳು ವೃತ್ತಿಜೀವನದ ಪ್ರಗತಿಯನ್ನು ಹೆಚ್ಚಿಸಲು ಹೆಚ್ಚಿನ ಅವಕಾಶಗಳನ್ನು ನೀಡುತ್ತವೆ ಎಂದು ಸರ್ಕಾರ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ತಿಳಿಸಿದೆ.


Click it and Unblock the Notifications











