ರಾಜ್ಯದಲ್ಲಿ ಶಾಲೆ ಯಾವಾಗ ಆರಂಭವಾಗತ್ತೆ ಎನ್ನುವ ಪ್ರಶ್ನೆಗಳಿಗೆ ಬ್ರೇಕ್ ಹಾಕಲು ಕೊರೋನಾ ಸಾಂಕ್ರಾಮಿಕದ ನಡುವೆಯೂ ಈಗಾಗಲೇ 9, 10 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಗೊಂಡಿದೆ. ಇದೀಗ ಪ್ರಾಥಮಿಕ ಹಂತದ ಶಾಲೆಯ ವಿದ್ಯಾರ್ಥಿಗಳ ಭವಿಷ್ಯವೇನು ಎನ್ನುವ ಕುತೂಹಲ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸುವ ಕುರಿತು ನಾಳೆ ಮಹತ್ವದ ಸಭೆ ನಡೆಯಲಿದ್ದು, ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹಾಜರಾಗಲಿದ್ದು, 1 ರಿಂದ 8ನೇ ತರಗತಿ ವಿದ್ಯಾರ್ಥಿಗಳ ಶಾಲೆ ಆರಂಭ ಕುರಿತು ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಶೇ.2ಕ್ಕಿಂತ ಕಡಿಮೆ ಪಾಸಿಟಿವ್ ವರದಿಯಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸುವ ಚಿಂತನೆ ನಡೆಯುತ್ತಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಆಧಾರದ ಮೇಲೆ 1 ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಶಾಲೆಗಳನ್ನು ಪುನರಾರಂಭಿಸಲು ಅವಕಾಶ ಒದಗಿದರೆ ಸೆಪ್ಟೆಂಬರ್ ತಿಂಗಳ ಮೊದಲ ವಾರದಿಂದಲೇ ಶಾಲೆ ಆರಂಭವಾಗುವ ಸಾಧ್ಯತೆ ಇದೆ.
ರಾಜ್ಯ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಈ ಕುರಿತು ಆಗಸ್ಟ್ 30,2021ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಂದು 1 ರಿಂದ 8ನೇ ತರಗತಿವರೆಗಿನ ಶಾಲೆ ಆರಂಭದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.
ಕೊರೋನಾ ದೇಶಕ್ಕೆ ಹೆಜ್ಜೆ ಇಟ್ಟ ಒಂದೂವರೆ ವರ್ಷದ ಬಳಿಕ ಶಾಲೆಗಳ ಆರಂಭದ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಪ್ರಸಕ್ತ ವರ್ಷದಲ್ಲಿ ಅನೇಕ ಪರೀಕ್ಷೆಗಳು ರದ್ದಾಗಿವೆ ಮತ್ತು ಕೆಲವು ಪರೀಕ್ಷೆಗನ್ನು ನಡೆಸಲಾಗಿದೆ. ಅದರಲ್ಲೂ ಹಲವು ವಿರೋಧಗಳ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲಾಗಿದ್ದು, ಪರೀಕ್ಷಾ ಫಲಿತಾಂಶವನ್ನು ಆಗಸ್ಟ್ ೯,೨೦೨೧ರಂದು ಪ್ರಕಟಿಸಲಾಗಿದೆ. ಅಲ್ಲದೆ ಆಗಸ್ಟ್ ೨೮ ರಿಂದ ೩೦,೨೦೨೧ರ ವರೆಗೆ ಸಿಇಟಿ ಪರೀಕ್ಷೆಗಳು ನಡೆಯುತ್ತಿವೆ.


Click it and Unblock the Notifications











