
ಕೊರೋನಾ 3ನೇ ಅಲೆ ತಡೆಗಟ್ಟುವಿಕೆಗೆ ಸಲಹೆ ನೀಡಲು ಮತ್ತು ನಿಯಂತ್ರಿಸಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಕುರಿತು ಉನ್ನತ ಮಟ್ಟದ ನುರಿತ ತಜ್ಞರ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಹಾಗೂ ಇತರ ಸದಸ್ಯರು ಸಭೆ ನಡೆಸಿ ಕರ್ನಾಟಕ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಏನೆಲ್ಲಾ ಇದೆ ? ಈ ಕುರಿತು ಸರ್ಕಾರ ಏನು ಹೇಳಿದೆ ಎಂದು ತಿಳಿಯೋಣ.
ರಾಜ್ಯದಲ್ಲಿ ಶಾಲಾ ಕಾಲೇಜುಗಳು ಮತ್ತೆ ಆರಂಭವಾಗಲಿವೆಯೇ ಎಂಬುದಕ್ಕೆ ಇದೀಗ ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಿದ ಬಳಿಕ ಹಂತ ಹಂತವಾಗಿ ಎಲ್ಲ ರೀತಿಯ ಪದವಿ ಕಾಲೇಜುಗಳಲ್ಲಿ ತರಗತಿ ಆರಂಭಿಸುವಂತೆ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.
ಮಂಗಳವಾರ ನಡೆದ ಸಭೆಯಲ್ಲಿ ತಜ್ಞರ ಸಮಿತಿಯು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತು. ತದನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, 'ರಾಜ್ಯದಲ್ಲಿ ಶಾಲಾ, ಕಾಲೇಜುಗಳನ್ನು ಹಂತ ಹಂತವಾಗಿ ಪುನರಾರಂಭ ಮಾಡುವಂತೆ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ಮೊದಲ ಹಂತದಲ್ಲಿ ಎಲ್ಲ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಿ, ಪದವಿ ಕಾಲೇಜುಗಳ ತರಗತಿಗಳನ್ನು ಆರಂಭಿಸುವಂತೆ ಶಿಫಾರಸ್ಸು ಮಾಡಿದೆ.
ಎರಡನೇ ಹಂತದಲ್ಲಿ 8ರಿಂದ 10ನೇ ತರಗತಿಗೆ ಶಾಲೆ ಆರಂಭಿಸುವುದು ಹಾಗೂ ಮೂರನೇ ಹಂತದಲ್ಲಿ 5ರಿಂದ 7ನೇ ತರಗತಿಗಳನ್ನು ಆರಂಭಿಸುವುದು ಸೂಕ್ತ ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ಶಾಲಾ ಕಾಲೇಜಿನಲ್ಲಿ ಕೊರೊನಾ ನಿಯಮಾವಳಿಗಳು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಸಮಿತಿಯ ಶಿಫಾರಸ್ಸಿನಂತೆ ೧೮ ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ತದನಂತರ ತರಗತಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಲಸಿಕೆ ಲಭ್ಯವಿಲ್ಲ. ಪ್ರಕ್ರಿಯೆ ಇನ್ನೂ ಪ್ರಾಯೋಗಿಕ ಹಂತದಲ್ಲಿ ಇದೆ. ಈ ಕುರಿತು ನಂತರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಆಗುವ ಸಾಧ್ಯತೆ ಇದೆ. ಈ ಕುರಿತು ಸಮಿತಿ ಅಧ್ಯಯನ ನಡೆಸುತ್ತಿದೆ. ಮೂರನೇ ಅಲೆ ಎದುರಿಸಲು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಚಿಕಿತ್ಸೆಗೆ ವಿಶೇಷ ಆಸ್ಪತ್ರೆ ಮತ್ತು ವಿಶೇಷ ವಾರ್ಡ್ ಗಳನ್ನು ಸಜ್ಜುಗೊಳಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಅದಲ್ಲದೆಯೇ ದಿನ ಬಿಟ್ಟು ದಿನ ತರಗತಿ ನಡೆಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ, ಕೊರೋನಾ ವೈರಾಣು ಸೋಂಕಿತ ಮಕ್ಕಳಿಗೆ ಮನೋಸ್ಥೈರ್ಯ ತುಂಬಲು ಆಸ್ಪತ್ರೆಗಳಲ್ಲಿ ಮನೋವೈದ್ಯರ ಸೇವೆ, ಕಾರ್ಪೋರೇಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ, ಮಾನವ ಸಂಪನ್ಮೂಲ ಹೆಚ್ಚಿಸುವುದು ಸೇರಿದಂತೆ ಇನ್ನು ಹಲವು ವಿಷಯಗಳ ಕುರಿತು ಸಮಿತಿ ಶಿಫಾರಸ್ಸು ಮಾಡಿದೆ ಎಂದು ತೀಳಿಸಿದರು.


Click it and Unblock the Notifications











