ಎಂಜಿನಿಯರಿಂಗ್ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆ-ಸಿಇಟಿ) ಯನ್ನು ಜುಲೈ 30 ಮತ್ತು 31,2020 ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಕೈಗೊಂಡಿದೆ. ಹಲವು ಮುಂಜಾಗ್ರತೆಗಳೊಂದಿಗೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಟ್ವೀಟ್ ಮೂಲಕ ಹೇಳಿದ್ದಾರೆ.

ಈ ಬಾರಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ಹಲವು ತಾಲೂಕು ಕೇಂದ್ರಗಳೂ ಸೇರಿದಂತೆ 127 ಸ್ಥಳಗಳಲ್ಲಿ ಒಟ್ಟು 499 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟಾರೆ 2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ತಮ್ಮ ಊರುಗಳಿಗೆ ತೆರಳಿರುವ ಸುಮಾರು 26 ಸಾವಿರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ, ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಪರೀಕ್ಷೆಗೆ ಅವಕಾಶವಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.
ಇನ್ನು ಹೊರ ರಾಜ್ಯದಲ್ಲಿರುವ ವಿದ್ಯಾರ್ಥಿಗಳು ಯಾವುದೇ ಪಾಸ್‌ಗಳಿಲ್ಲದೆ 72 ಗಂಟೆಗಳ ಅವಧಿಯಲ್ಲಿ ರಾಜ್ಯಕ್ಕೆ ಬಂದು ಹೋಗಲು ಸರಕಾರ ಕಾಲಾವಕಾಶ ನೀಡಲಾಗಿದೆ. ಹಾಗಾಗಿ, ಸಿಇಟಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗಾಗಿ ಈ ಅವಧಿಯನ್ನು ಕನಿಷ್ಠ 90 ಅಥವಾ 96 ಗಂಟೆಗಳಿಗೆ ಹೆಚ್ಚಳ ಮಾಡುವಂತೆ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಹೊರನಾಡು ಮತ್ತು ಗಡಿನಾಡ ವಿದ್ಯಾರ್ಥಿಗಳಿಗೆ ಆಗಸ್ಟ್ 1ರ ಶನಿವಾರ ಬೆಳಗ್ಗೆ 11.30ರಿಂದ 12.30ರವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಪ್ರವೇಶ ಪತ್ರವು ಅತೀ ಶೀಘ್ರದಲ್ಲಿ ಪ್ರಕಟ ಮಾಡಲಾಗುವುದು.
ಈ ವರ್ಷ 1,088 ಮಂದಿ ಹೊರನಾಡು ಮತ್ತು ಗಡಿನಾಡ ಕನ್ನಡಿಗ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಕೇರಳ ಹಾಗೂ ಕಾಸರಗೋಡಿನ ಕಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಮಂಗಳೂರು, ಮಹಾರಾಷ್ಟ್ರದ ಗಡಿಯಿಂದ ಬರುವವರಿಗೆ ಇಂಡಿ ಹಾಗೂ ವಿಜಯಪುರ ಸೇರಿದಂತೆ ಇತರೆ ಸ್ಥಳಗಳು, ಆಂಧ್ರಪ್ರದೇಶದ ಕಡೆಯಿಂದ ಬರುವವರಿಗೆ ಬಳ್ಳಾರಿ ಜಿಲ್ಲೆಸೇರಿದಂತೆ ಹತ್ತಿರದ ಗಡಿ ಜಿಲ್ಲೆಗಳಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.


Click it and Unblock the Notifications











