ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳ ಪರೀಕ್ಷೆಯು ನಿಗದಿತ ದಿನಾಂಕದಂದೇ ನಡೆಯಲಿದೆ ಎಂದು ಕೆಪಿಎಸ್‌ಸಿಯ ಮೂಲಗಳು ತಿಳಿಸಿವೆ.
ಕೆಲ ದಿನಗಳಿಂದ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳನ್ನು ಮುಂದೂಡಲಾಗುತ್ತದೆ ಎಂಬ ವದಂತಿ ಕೆಲವೆಡೆ ಹಬ್ಬಿತ್ತು. ಈ ವಿಷಯ ತಳ್ಳಿಹಾಕಿರುವ ಕೆಪಿಎಸ್ಸಿ ಈಗಾಗಲೇ ಪ್ರಕಟಿಸಿರುವ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರವೇ ಲಿಖಿತ ಪರೀಕ್ಷೆ ನಡೆಸಲಿದೆ ಎಂದು ತಿಳಿಸಿದೆ.

ತಾತ್ಕಾಲಿಕ ವೇಳಾಪಟ್ಟಿ ಯಂತೆ ಎಫ್‌ಡಿಎ ಹುದ್ದೆಗಳಿಗೆ ಫೆಬ್ರವರಿ 4 ರಂದು ಹಾಗೂ ಎಸ್‌ಡಿಎ ಹುದ್ದೆಗಳಿಗೆ ಫೆಬ್ರವರಿ 11ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು. ಈ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಫೆಬ್ರವರಿ 10ರಂದು ನಡೆಸಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು.

ಲಿಖಿತ ಪರೀಕ್ಷೆ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಜನವರಿ 26ರ ಒಳಗೆ ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯರ್ಥಿಗಳಿಗೆ ವೆಬ್ ಮೂಲಕ ಒದಗಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳ ಹಂಚಿಕೆ ಮತ್ತಿತರ ಕೆಲಸಗಳು ಕೂಡ ಪೂರ್ಣಗೊಂಡಿವೆ ಎಂದು ಕೆಪಿಎಸ್‌ಸಿಯ ಮೂಲಗಳು ತಿಳಿಸಿವೆ.
ಒಟ್ಟು 1, 812 ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆಯೇ ನೇಮಕಾತಿ ನಡೆಯಲಿದೆ. ಪ್ರಥಮ ದರ್ಜೆ ಸಹಾಯಕರು ಒಟ್ಟು 961 ಹುದ್ದೆ ಹಾಗೂ ದ್ವಿತೀಯ ದರ್ಜೆ ಸಹಾಯಕರು ಒಟ್ಟು 851 ಹುದ್ದೆಗಳ ನೇಮಕಾತಿಗೆ ಸೆಪ್ಟಂಬರ್ ನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿತ್ತು.


Click it and Unblock the Notifications











