
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಿಕ್ಷಣ ಮಂತ್ರಿಗಳು ಮತ್ತು ಭಾರತದ ವಿವಿಧ ರಾಜ್ಯಗಳ ಶಿಕ್ಷಣ ಸಚಿವರ ನಡುವಿನ ಉನ್ನತ ಮಟ್ಟದ ಸಭೆಯ ನಂತರ ಜೂನ್ 1 ರಂದು 12 ನೇ ತರಗತಿಯ ಸಿಬಿಎಸ್ಇ ಮಂಡಳಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಿಬಿಎಸ್‌ಇ, ಸಿಐಎಸ್‌ಸಿಇ ಪರೀಕ್ಷೆಗಳನ್ನು ರದ್ದುಪಡಿಸಿದ ನಂತರ ವಿವಿಧ ರಾಜ್ಯ ಸರ್ಕಾರಗಳು ಕೆಲವು ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡುವ ಮೂಲಕ ಪಿಎಂ ಮೋದಿಯವರ ನಿರ್ಧಾರವನ್ನು ಅನುಸರಿಸಲು ತೀರ್ಮಾನಿಸಿವೆ.
1.ಗುಜರಾತ್:
ಗುಜರಾತ್ ದ್ವಿತೀಯ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿ (ಜಿಎಸ್‌ಎಚ್‌ಎಸ್‌ಇಬಿ) 12 ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಗುಜರಾತ್ ಶಿಕ್ಷಣ ಸಚಿವ ಭೂಪೇಂದ್ರಸಿಂಹ ಚುಡಾಸಮಾ ಪ್ರಕಟಿಸಿದರು.
2.ಮದ್ಯಪ್ರದೇಶ:
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ 12ನೇ ತರಗತಿ ಎಂಪಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದಾರೆ.
3.ಉತ್ತರಾಖಂಡ:
ಉತ್ತರಾಖಂಡದಲ್ಲಿ ಮುಖ್ಯಮಂತ್ರಿಯೊಂದಿಗೆ ನಡೆಸಿದ ಸಮಾಲೋಚನೆ ನಂತರ ಶಿಕ್ಷಕರು ಮತ್ತು ಪೋಷಕರ ಆರೋಗ್ಯದ ಹಿತದೃಷ್ಟಿಯಿಂದ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವುದಾಗಿ ರಾಜ್ಯ ಶಿಕ್ಷಣ ಸಚಿವ ಅರವಿಂದ್ ಪಾಂಡೆ ಪ್ರಕಟಿಸಿದರು.
4. ಉತ್ತರ ಪ್ರದೇಶ:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವಿಟರ್ ನಲ್ಲಿ ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಣ ಮಂಡಳಿ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಪಡಿಸಿದೆ ಎಂದು ಪ್ರಕಟಿಸಿದ್ದರು.
5.ರಾಜಸ್ಥಾನ:
2021ರ ಆರ್‌ಬಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸ್ರಾ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
6.ಹರಿಯಾಣ:
ಕೇಂದ್ರ ಸರ್ಕಾರದ ನಿರ್ಧಾರವನ್ನು ಅನುಸರಿಸಿ ಹರಿಯಾಣ ಶಾಲಾ ಶಿಕ್ಷಣ ಮಂಡಳಿ 2021ರ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಹರಿಯಾಣ ಶಿಕ್ಷಣ ಸಚಿವ ಕನ್ವರ್ ಪಾಲ್ ಪ್ರಕಟಿಸಿದ್ದಾರೆ. ರಾಜ್ಯ ಸರ್ಕಾರವು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಿದೆ.
7.ಗೋವಾ:
ಗೋವಾ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ 2021ರ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಮಂಡಳಿಯು ನೀಡಿದ ಅಂಕಗಳಿಂದ ತೃಪ್ತರಾಗದ ವಿದ್ಯಾರ್ಥಿಗಳು ನಂತರ ಪರೀಕ್ಷೆಗೆ ಹಾಜರಾಗಬಹುದು ಎಂದು ಗೋವಾ ಮಂಡಳಿಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
8.ಮಹಾರಾಷ್ಟ್ರ:
ಮಹಾರಾಷ್ಟ್ರದಲ್ಲಿ 2021ನೇ ಸಾಲಿನಲ್ಲಿ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಪಡಿಸುವುದಾಗಿ ರಾಜ್ಯ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಾಡೆಟ್ಟಿವಾರ್ ಘೋಷಿಸಿದರು.
9.ಒಡಿಶಾ:
ಒಡಿಶಾ ರಾಜ್ಯದಲ್ಲಿ 2021ನೇ ಸಾಲಿನ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವುದು ಮತ್ತು ವಿದ್ಯಾರ್ಥಿಗಳನ್ನು ವಸ್ತುನಿಷ್ಠ ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲು ಒಡಿಶಾ ಸರ್ಕಾರ ನಿರ್ಧರಿಸಿದೆ.
1೦. ತೆಲಂಗಾಣ:
2021ರ ಮಧ್ಯಂತರ ದ್ವಿತೀಯ ವರ್ಷದ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಮೊದಲ ವರ್ಷದ ಅಂಕಗಳ ಆಧಾರದ ಮೇಲೆ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಗುರುತಿಸಲು ರಾಜ್ಯ ಸರ್ಕಾರ ನಿರ್ಧರಿಸಬಹುದು.
11. ಕರ್ನಾಟಕ:
ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಶುಕ್ರವಾರ ಪ್ರಕಟಿಸಿದರು. ವಿದ್ಯಾರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಮೌಲ್ಯಾಂಕನ ಮಾಡಲಾಗುವುದು ಎಂದು ಘೋಷಿಸಿದ್ದರು.


Click it and Unblock the Notifications











