ಐಐಟಿಯಲ್ಲಿ ಶೀಘ್ರವೇ ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ಸೀಟುಗಳು ಸಿಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಐಐಟಿ ಸಭೆಯಲ್ಲಿ ಮಾತನಾಡಿದ ಅವರು ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ವರ್ಷಕ್ಕೆ 8 ರಿಂದ 9 ಪರ್ಸೆಂಟ್ ಮಹಿಳೆಯರು ಇಂಜಿನಿಯರಿಂಗ್ ಸೇರುತ್ತಿದ್ದು 2020 ರ ವೇಳೆಗೆ ಇದು ಶೇ.20ಕ್ಕೆ ಏರಿಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ಇತರೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.40 ರಷ್ಟು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ ಆದರೆ ಐಐಟಿಯಲ್ಲಿ ಶೇ.8 ರಷ್ಟು ಮಾತ್ರ ಇದ್ದಾರೆ. ಐಐಟಿಗಳಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಐಐಟಿ ಸಮಿತಿಯ ಛೇರ್ಮನ್ ಅಶೋಕ್ ಮಿಶ್ರಾ ತಿಳಿಸಿದರು.
'ಜೆಇಇ (ಅಡ್ವಾನ್ಸ್) ಪರೀಕ್ಷೆಗೆ ಹಾಜರಾಗಿದ್ದ 4,500 ವಿದ್ಯಾರ್ಥಿನಿಯರಲ್ಲಿ ಕೇವಲ 800 ವಿದ್ಯಾರ್ಥಿನಿಯರು ಮಾತ್ರ ಐಐಟಿಗಳಲ್ಲಿ ಪ್ರವೇಶ ಪಡೆದಿದ್ದರು. ಈಗ ಕೈಗೊಂಡಿರುವ ನಿರ್ಧಾರದಿಂದ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ' ಎಂದು ಅವರು ಹೇಳಿದರು.
ಸಭೆಯ ನಿರ್ಧಾರಗಳು
ಮುಂಬೈನಲ್ಲಿ ನಡೆದ ಸಭೆಯಲ್ಲಿ ಈಗಿರುವ ಸೀಟುಗಳಿಗಿಂತ ಹೆಚ್ಚುವರಿಯಾಗಿ ಶೇಕಡ 4ರಷ್ಟು ಸೀಟುಗಳನ್ನು ನೀಡಲು ಎಲ್ಲ 23 ಸಂಸ್ಥೆಗಳು ಒಪ್ಪಿಗೆ ಸೂಚಿಸಿದ್ದು, ಮುಂದಿನ ವರ್ಷದಿಂದಲೇ ಇದು ಜಾರಿಗೆ ಬರಲಿದೆ
ಜೆಇಇ ಮತ್ತು ಗೇಟ್ ಪರೀಕ್ಷೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಯೋಜನೆ ಇದ್ದು, ವಿದೇಶಿ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಬಗ್ಗೆಯು ಸಭೆಯಲ್ಲಿ ಚರ್ಚಿಸಲಾಯಿತು.
ಶುಲ್ಕ ಹೆಚ್ಚಳ
ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕವನ್ನು ಹೆಚ್ಚಳ ಮಾಡುವ ಸಾಧ್ಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ 20 ಸಾವಿರ ಶುಲ್ಕವನ್ನು ನಿಗದಿಪಡಿಸಲಾಗಿದೆ, ಆದರೆ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷ 1.24 ಲಕ್ಷವನ್ನು ಖರ್ಚು ಮಾಡಲಾಗುತ್ತಿದೆ. ಹಾಗಾಗಿ ಸ್ನಾತಕೋತ್ತರ ಪದವಿಯ ಶುಲ್ಕವನ್ನು ಹೆಚ್ಚಿಸುವ ಸಾಧ್ಯತೆ ಇದೆ.


Click it and Unblock the Notifications











