ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ 2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಸೆ.13ರಂದು ನಡೆಯಲಿದೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಸೇರಿದಂತೆ ಕೆಲವು ನಿಯಮಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪ್ರಕಟಿಸಿದೆ.
ನೀಟ್ ಪರೀಕ್ಷೆಗೆ ಪಾಲಿಸಬೇಕಾದ ನಿಯಮಗಳು:
* ನೀಟ್ ಪರೀಕ್ಷೆ ಬರೆಯುವುದಕ್ಕೆ ತೆರಳುವ ಪರೀಕ್ಷಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಹೊರಡಿಸಿರುವ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಪ್ರಮುಖವಾಗಿ ಎನ್ಟಿಎಯ ಹೊಸ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಪೂರ್ಣ ತೋಳು, ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳುವಂತಿಲ್ಲ.
* ದೊಡ್ಡ ಗುಂಡಿ(ಬಟನ್)ಗಳನ್ನು ಹೊಂದಿರುವ ಬಟ್ಟೆಯನ್ನು ಧರಿಸಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವುದಕ್ಕೆ ಅನುಮತಿಯಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ನೀಡಿರುವ ಪರೀಕ್ಷಾ ಗುರುತಿನ ಚೀಟಿಯಲ್ಲಿ ಉಲ್ಲೇಖಿಸಲಾಗಿದೆ. ಪರೀಕ್ಷಾರ್ಥಿಗಳು ಬೂಟ್ ಧರಿಸಿಕೊಂಡು ಹೋಗುವುದಕ್ಕೆ ಅನುಮತಿಯಿರುವುದಿಲ್ಲ. ಅದರ ಬದಲು ಚಪ್ಪಲಿಯನ್ನು ಮಾತ್ರ ಹಾಕಿಕೊಂಡು ಹೋಗಬೇಕೆಂದು ಹೊಸ ನಿಯಮಗಳಲ್ಲಿ ಹೇಳಲಾಗಿದೆ.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಪಾಲಿಸಬೇಕಾದ ನಿಯಮಗಳು:
* ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು.
* ಅಭ್ಯರ್ಥಿಗಳು ಪರೀಕ್ಷೆಗೆ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದಲ್ಲಿ ಹಾಜರು ಇರಬೇಕು. ಕೊವಿಡ್-19 ಹಿನ್ನೆಲೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷಿಸಿದ ಬಳಿಕವಷ್ಟೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗುತ್ತದೆ.
* ನೀಟ್ ಪರೀಕ್ಷೆಗೆ ತೆರಳು ವಿದ್ಯಾರ್ಥಿಗಳು ಮುದ್ರಿತ ಅಥವಾ ಬರೆದ ಸಾಮಗ್ರಿಗಳು, ಪೆನ್ಸಿಲ್ ಬಾಕ್ಸ್, ಪೆನ್ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇರುವುದಿಲ್ಲ.