ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (MCC) ನೀಟ್ ಯುಜಿ 2026ರ 3ನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಾಳೆ, ಸೆಪ್ಟೆಂಬರ್ 22 ರಿಂದ ಆರಂಭಿಸಲಿದೆ. ಕಾಲೇಜುಗಳಿಂದ ಸೀಟ್ ಮ್ಯಾಟ್ರಿಕ್ಸ್ ಪರಿಶೀಲನೆ ಕಾರ್ಯ ಇಂದು, ಸೆಪ್ಟೆಂಬರ್ 21 ರಂದು ನಡೆಯಲಿದೆ. ಅರ್ಹತೆ, ಛಾಯ್ಸ್ ಲಾಕಿಂಗ್ ಮತ್ತು ಕಾಲೇಜು ರಿಪೋರ್ಟಿಂಗ್ ಕುರಿತು ಆತಂಕದಲ್ಲಿರುವ ವಿದ್ಯಾರ್ಥಿಗಳು ಈಗಲೇ ಸೂಕ್ತ ಯೋಜನೆ ರೂಪಿಸಿಕೊಳ್ಳಬಹುದು. ನಿಮಗಾಗಿ ಪ್ರಮುಖ ದಿನಾಂಕಗಳು, ನಿಯಮಗಳು ಮತ್ತು ಅಗತ್ಯ ಮಾಹಿತಿಯನ್ನು ಇಲ್ಲ ನೀಡಲಾಗಿದೆ.
ಸೆಪ್ಟೆಂಬರ್ 22 ರಿಂದ 27 ರವರೆಗೆ ನೋಂದಣಿ (ರಜಿಸ್ಟ್ರೇಷನ್) ಮಾಡಿಕೊಳ್ಳಲು ಅವಕಾಶವಿದೆ. ಸೆಪ್ಟೆಂಬರ್ 23 ರಿಂದ ಆರಂಭವಾಗುವ ಛಾಯ್ಸ್ ಫಿಲ್ಲಿಂಗ್ ಪ್ರಕ್ರಿಯೆಯು ಸೆಪ್ಟೆಂಬರ್ 28 ಕ್ಕೆ ಮುಕ್ತಾಯಗೊಳ್ಳಲಿದೆ. ಇನ್ನು ಫಲಿತಾಂಶವು ಸೆಪ್ಟೆಂಬರ್ 30 ರಂದು ಹೊರಬೀಳಲಿದ್ದು, ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಅಕ್ಟೋಬರ್ 1 ರಿಂದ 9 ರೊಳಗೆ ಕಾಲೇಜುಗಳಿಗೆ ತೆರಳಿ ವರದಿ ಮಾಡಿಕೊಳ್ಳಬೇಕಾಗುತ್ತದೆ. ಇಡೀ ಕೌನ್ಸೆಲಿಂಗ್ ಪ್ರಕ್ರಿಯೆಯು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 10 ರವರೆಗೆ ನಡೆಯಲಿದೆ.

ನೀಟ್ ಯುಜಿ 2026 ರೌಂಡ್ 3 ವೇಳಾಪಟ್ಟಿ ಮತ್ತು ಛಾಯ್ಸ್ ಲಾಕಿಂಗ್
ನಿಮ್ಮ ಆದ್ಯತೆಯ ಕಾಲೇಜುಗಳ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿಕೊಂಡು, ನಿಗದಿತ ಸಮಯದಲ್ಲಿ ಲಾಕ್ ಮಾಡಿ. ಒಮ್ಮೆ ಲಾಕ್ ಮಾಡಿದ ನಂತರ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ಹೀಗಾಗಿ ಕಾಲೇಜು, ಕೋಟಾ ಮತ್ತು ಕೋರ್ಸ್‌ಗಳ ಆದ್ಯತೆಯನ್ನು ಸರಿಯಾಗಿ ಪರಿಶೀಲಿಸಿ. ಲಾಕ್ ಮಾಡಿದ ಛಾಯ್ಸ್ ಮತ್ತು ಶುಲ್ಕ ಪಾವತಿಯ ರಸೀದಿಯ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ. ಜೊತೆಗೆ ಡಾಕ್ಯುಮೆಂಟ್ ಅಪ್‌ಲೋಡ್ ಹಾಗೂ ಮರು ಪರಿಶೀಲನೆಗೆ ಸಂಬಂಧಿಸಿದಂತೆ ಡ್ಯಾಶ್‌ಬೋರ್ಡ್ ಅಪ್‌ಡೇಟ್ಸ್ ಮತ್ತು ಎಸ್‌ಎಂಎಸ್ (SMS) ಸಂದೇಶಗಳನ್ನು ನಿಯಮಿತವಾಗಿ ಗಮನಿಸುತ್ತಿರಿ.
ನೀಟ್ ಯುಜಿ 2026 ರೌಂಡ್ 3 ಗೆ ಯಾರಿಗೆಲ್ಲ ಅರ್ಹತೆ ಇದೆ?
ಹೊಸದಾಗಿ ನೋಂದಾಯಿಸಿಕೊಳ್ಳುವವರು ಹಾಗೂ ಹಿಂದಿನ ಸುತ್ತುಗಳಲ್ಲಿ ಸೀಟು ಸಿಗದ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಬಹುದು. ನಿಯಮಾವಳಿಗಳ ಪ್ರಕಾರ, ಸೀಟು ಸಿಕ್ಕರೂ ಸೇರ್ಪಡೆಯಾಗದ ಅಥವಾ ಸೀಟಿಗೆ ರಾಜೀನಾಮೆ ನೀಡಿದ ಅಭ್ಯರ್ಥಿಗಳಿಗೂ ಅವಕಾಶವಿರಲಿದೆ. ಆದರೆ, ಪ್ರಸ್ತುತ ಸೀಟು ಪಡೆದು ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಅವಕಾಶವಿರುವುದಿಲ್ಲ. ಅಂತಿಮ ಅರ್ಹತೆಯ ಷರತ್ತುಗಳಿಗಾಗಿ ಯಾವಾಗಲೂ ಅಧಿಕೃತ ಕೌನ್ಸೆಲಿಂಗ್ ಸೂಚನೆಯನ್ನೇ ಪರಿಶೀಲಿಸಿ.
ನೋಂದಣಿ, ಶುಲ್ಕ ಪಾವತಿ ಮತ್ತು ನಕಲಿ ಲಿಂಕ್‌ಗಳ ಬಗ್ಗೆ ಎಚ್ಚರ!
ಮೆಡಿಕಲ್ ಕೌನ್ಸೆಲಿಂಗ್ ಕಮಿಟಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ನೋಂದಣಿ ಮಾಡಿ. ಸೋಶಿಯಲ್ ಮೀಡಿಯಾ ಅಥವಾ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುವ ನಕಲಿ ಹಾಗೂ ಥರ್ಡ್-ಪಾರ್ಟಿ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಕೊನೆಯ ಕ್ಷಣದ ಸರ್ವರ್ ಮತ್ತು ಬ್ಯಾಂಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಶುಲ್ಕವನ್ನು ಮೊದಲೇ ಪಾವತಿಸಿ. ಪರೀಕ್ಷೆಯ ನೋಂದಣಿ ವೇಳೆ ನೀಡಿದ್ದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನೇ ಬಳಸಿ. ಟ್ರಾನ್ಸಾಕ್ಷನ್ ಐಡಿ ಮತ್ತು ರಸೀದಿಗಳನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ. ಅಧಿಕೃತವಾಗಿ ಅವಕಾಶ ನೀಡದ ಹೊರತು ಕೆಟಗರಿ ವಿವರಗಳನ್ನು ಬದಲಾಯಿಸಬೇಡಿ; ವ್ಯತ್ಯಾಸ ಕಂಡುಬಂದರೆ ಅರ್ಜಿ ರದ್ದಾಗುವ ಸಾಧ್ಯತೆಯಿರುತ್ತದೆ.
ಸೀಟ್ ಮ್ಯಾಟ್ರಿಕ್ಸ್ ಪರಿಶೀಲನೆ ಮತ್ತು ಹೊಸ ಸೀಟುಗಳ ಸೇರ್ಪಡೆ
ಸೆಪ್ಟೆಂಬರ್ 21 ರಂದು ಕಾಲೇಜುಗಳು ತಮ್ಮ ಸೀಟ್ ಮ್ಯಾಟ್ರಿಕ್ಸ್ ಪರಿಶೀಲಿಸುತ್ತವೆ. ಛಾಯ್ಸ್ ಫಿಲ್ಲಿಂಗ್ ಮುಗಿಯುವ ಮೊದಲು ಹೊಸ ಕಾಲೇಜುಗಳು, ಕೋಟಾ ಬದಲಾವಣೆ ಅಥವಾ ಉಳಿದ ಸೀಟುಗಳು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಲಾಕ್ ಮಾಡುವ ಮುನ್ನ ಪ್ರತಿದಿನ ಲಭ್ಯವಿರುವ ಸೀಟುಗಳ ಪಟ್ಟಿಯನ್ನು ಮರುಪರಿಶೀಲಿಸಿ. ಅಧಿಕೃತ ಸೀಟ್-ಮ್ಯಾಟ್ರಿಕ್ಸ್ ದಾಖಲೆಗಳನ್ನು ಗಮನಿಸಿ ನಿಮ್ಮ ಸೂಕ್ತ ಆಯ್ಕೆಗಳಿಗೆ ಆದ್ಯತೆ ನೀಡಿ.
ಫಲಿತಾಂಶ, ಕಾಲೇಜು ರಿಪೋರ್ಟಿಂಗ್ ಮತ್ತು ಅಗತ್ಯ ದಾಖಲೆಗಳು
ರೌಂಡ್ 3ರ ಫಲಿತಾಂಶ ಸೆಪ್ಟೆಂಬರ್ 30 ರಂದು ಪ್ರಕಟವಾಗಲಿದೆ. ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಅಕ್ಟೋಬರ್ 1 ರಿಂದ 9 ರ ನಡುವೆ ನಿಯೋಜಿತ ಕಾಲೇಜಿಗೆ ತೆರಳಿ ಪ್ರವೇಶ ಪಡೆಯಬೇಕು. ಈ ವೇಳೆ ಅಡ್ಮಿಟ್ ಕಾರ್ಡ್, ರ್ಯಾಂಕ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋಗಳು, ಗುರುತಿನ ಚೀಟಿ, 10 ಮತ್ತು 12 ನೇ ತರಗತಿ ಅಂಕಪಟ್ಟಿಗಳು, ಕೆಟಗರಿ/ವಿಕಲಚೇತನ ಪ್ರಮಾಣಪತ್ರ, ಅಲಾಟ್‌ಮೆಂಟ್ ಲೆಟರ್ ಮತ್ತು ಶುಲ್ಕ ಪಾವತಿಸಿದ ರಸೀದಿಗಳನ್ನು ಕಡ್ಡಾಯವಾಗಿ ಒಯ್ಯಬೇಕು. ಜೊತೆಗೆ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳು ಹಾಗೂ ಡಿಜಿಟಲ್ ಕಾಪಿಗಳನ್ನು (Scanned copies) ಇಟ್ಟುಕೊಳ್ಳುವುದು ಒಳಿತು.


Click it and Unblock the Notifications
