
ದೇಶದಾದ್ಯಂತ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಅಕ್ಟೋಬರ್ 1ರಿಂದ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ತಿಳಿಸಿದೆ. ಯುಜಿಸಿ ಹೊಸ ಮಾರ್ಗಸೂಚಿ ಅನುಸಾರ ಪದವಿ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆಯು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳ್ಳಲಿದೆ.
ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಎಲ್ಲಾ ರಾಜ್ಯ ಶಿಕ್ಷಣ ಮಂಡಳಿಗಳು ಫಲಿತಾಂಶ ಪ್ರಕಟಿಸಿದ ನಂತರವೇ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸುವಂತೆ ಯುಜಿಸಿ ಹೇಳಿದೆ.
ಎಲ್ಲಾ ಶಾಲಾ ಮಂಡಳಿಗಳು ಜುಲೈ 31 ರೊಳಗೆ 12 ನೇ ತರಗತಿ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಅರ್ಹತಾ ಪರೀಕ್ಷೆಗಳ ಫಲಿತಾಂಶವನ್ನು ಘೋಷಿಸುವಲ್ಲಿ ವಿಳಂಬವಾದರೆ ಅಕ್ಟೋಬರ್ 18ರಿಂದ ಹೊಸ ಶೈಕ್ಷಣಿಕ ವರ್ಷ ಪ್ರಾರಂಭಿಸಲಾಗುವುದು ಎಂದು ಯುಜಿಸಿ ತಿಳಿಸಿದೆ.
ಬೋಧನೆ-ಕಲಿಕೆಯ ಪ್ರಕ್ರಿಯೆಯು ಆಫ್‌ಲೈನ್, ಆನ್‌ಲೈನ್ ಅಥವಾ ಸಂಯೋಜಿತ ಕ್ರಮದಲ್ಲಿ ಮುಂದುವರಿಯಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ.
COVID-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸುವ ಅಗತ್ಯ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಅಕ್ಟೋಬರ್ 1 ರಿಂದ 2022ರ ಜುಲೈ 31 ರವರೆಗೆ ತರಗತಿ, ಪರೀಕ್ಷೆ, ಸೆಮಿಸ್ಟರ್ ವಿರಾಮ ಮತ್ತು ಇತ್ಯಾದಿಗಳಿಗೆ ಯೋಜಿನೆಗಳನ್ನು ರೂಪಿಸಬಹುದು ಎಂದು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಯೋಗವು ಸೂಚಿಸಿದೆ.
ಸಾಂಕ್ರಾಮಿಕ ರೋಗ ಹರಡಿರುವ ಸಮಯದಲ್ಲಿ ಪೋಷಕರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳ ಪ್ರವೇಶ ರದ್ದತಿ ಅಥವಾ ವಲಸೆಯ ಪ್ರಕರಣಗಳಲ್ಲಿ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಆಯೋಗವು ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಳಿದೆ.
ಆಗಸ್ಟ್ 31 ರೊಳಗೆ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಅಂತಿಮ ವರ್ಷ ಅಥವಾ ಅಂತಿಮ ಅವಧಿಯ ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆಗಳನ್ನು ಆಫ್‌ಲೈನ್, ಆನ್‌ಲೈನ್ ಅಥವಾ ಸಂಯೋಜಿತ ಕ್ರಮದಲ್ಲಿ ನಡೆಸಬಹುದು.
ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳ ಮೌಲ್ಯಮಾಪನವು ಆಂತರಿಕ ಮೌಲ್ಯಮಾಪನ ಮತ್ತು ಹಿಂದಿನ ಸೆಮಿಸ್ಟರ್ ಫಲಿತಾಂಶಗಳನ್ನು ಆಧರಿಸಿರುತ್ತದೆ ಎಂದು ಯುಜಿಸಿ ಹೇಳಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಅಥವಾ ಸಮರ್ಥ ಅಧಿಕಾರಿಗಳು ಕಾಲಕಾಲಕ್ಕೆ ನೀಡುವ ಅಗತ್ಯ ಮಾರ್ಗಸೂಚಿಗಳು, ನಿರ್ದೇಶನಗಳು ಮತ್ತು ಸಲಹೆಗಳನ್ನು ಅನುಸರಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯೂ ಸಿದ್ಧವಾಗಿರಬೇಕೆಂದು ಆಯೋಗ ಹೇಳಿದೆ.


Click it and Unblock the Notifications











