ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಕಾಡುತ್ತಿದೆ. ಪರಿಸ್ಥಿತಿ ಹೀಗೆ ಇದ್ದರೆ ಬಹುಶಃ 10ನೇ ತರಗತಿ ಪರೀಕ್ಷೆಗಳು ಮುಂದೂಡಬಹುದೇ ಎಂಬ ಗೊಂದಲ ಎದುರಾಗಿದೆ. ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ 'SSLC ಪರೀಕ್ಷೆಗಳನ್ನು ಮುಂದೂಡುವ ಯಾವುದೇ ಚಿಂತನೆ ಇಲ್ಲ' ಎಂದಿದ್ದಾರೆ.

ಈ ಹಿಂದೆ ನಿಗದಿ ಪಡಿಸಿದಂತೆ ಮಾರ್ಚ್ 27ರಿಂದಲೇ ಪರೀಕ್ಷೆಗಳು ನಡೆಯಲಿವೆ. ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬಹುದು ಹಾಗೆಯೇ ಒಂದು ಕೊಠಡಿಯಲ್ಲಿ ಕಡಿಮೆ ಮಕ್ಕಳನ್ನು ಕೂರಿಸುವಂತೆ ಇಲಾಖೆಯು ಸೂಚಿಸಿದೆ.
ಆರನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾಡಿದಂತೆ ಪರೀಕ್ಷೆಯನ್ನು ರದ್ದು ಮಾಡುವುದಾಗಲಿ, ಏಪ್ರಿಲ್ 9ರ ನಂತರ ಪರೀಕ್ಷೆಯನ್ನು ನಡೆಸುವುದಾಗಲಿ ಬೇಡ. ನಮ್ಮ ಸಾಮರ್ಥ್ಯವನ್ನು ನಾವು ಸಾಬೀತು ಪಡಿಸಲು ನಾವು ಸಜ್ಜಾಗಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮತ್ತೊಮ್ಮೆ ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಸೋಮವಾರದಂದು ಸರ್ಕಾರದ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.


Click it and Unblock the Notifications











