2022ರ 'ಪರೀಕ್ಷಾ ಪೇ ಚರ್ಚಾ' ದಿನಾಂಕವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಐದನೇ ಆವೃತ್ತಿಯ ಕಾರ್ಯಕ್ರಮ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಅವರ ಪರೀಕ್ಷಾ ಆತಂಕ ಮತ್ತು ಒತ್ತಡ ಕುರಿತು ಏಪ್ರಿಲ್ 1ರಂದು ಚರ್ಚೆ ನಡೆಲಿದ್ದಾರೆ.

ಐದನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಭಾರಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಲಿದ್ದಾರೆ.
ಪರೀಕ್ಷಾ ಪೇ ಚರ್ಚಾ 2022 ದಿನಾಂಕ ಮತ್ತು ಸಮಯವನ್ನು ಪ್ರಕಟಿಸುವಾಗ ಶಿಕ್ಷಣ ಸಚಿವಾಲಯವು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಹೇಳಿದೆ: "ನಿಮ್ಮ ನಿರೀಕ್ಷೆ ಇಂದಿಗೆ ಕೊನೆಗೊಂಡಿದೆ, #PPC2022ರ 5ನೇ ಆವೃತ್ತಿಯು ಏಪ್ರಿಲ್ 1,2022 ರಂದು ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಪರೀಕ್ಷೆಯ ಒತ್ತಡವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ತಮ್ಮ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಟ್ಯೂನ್ ಆಗಿರಿ!"
ಪ್ರಧಾನಿ ಮೋದಿಯವರ ಪರೀಕ್ಷಾ ಪೇ ಚರ್ಚಾವನ್ನು 2018 ರಿಂದ ವಾರ್ಷಿಕವಾಗಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ನೇರಪ್ರಸಾರ ಮೂಲಕ ಸಂವಾದ ನಡೆಸುತ್ತಾರೆ. ದೇಶದಲ್ಲಿ ಪರೀಕ್ಷೆಗಳು ಆಗಮಿಸುವ ಸಂದರ್ಭದಲ್ಲಿ ಈ ಕಾರ್ಯಕ್ರವನ್ನು ಆಯೋಜಿಸಲಾಗುತ್ತದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸೇರಿದಂತೆ ಹಲವಾರು ಬೋರ್ಡ್‌ಗಳು ಏಪ್ರಿಲ್ 26 ರಿಂದ ಟರ್ಮ್ 2 ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತವೆ. ಜಂಟಿ ಪ್ರವೇಶ ಪರೀಕ್ಷೆ (JEE) ಮುಖ್ಯ ಸೇರಿದಂತೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು ಸಹ ಏಪ್ರಿಲ್‌ನಲ್ಲಿ ನಡೆಯಲಿದೆ.
ಪರೀಕ್ಷಾ ಪೇ ಚರ್ಚಾ ಗೆ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಜನವರಿ 27,2022ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.
ಈ ಭಾರಿಯ ಪರೀಕ್ಷಾ ಪೇ ಚರ್ಚಾ 2022ಗೆ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ವರ್ಷದ ಪರೀಕ್ಷಾ ಪೇ ಚರ್ಚಾಗಾಗಿ 2.71 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಹ ನೋಂದಾಯಿಸಿಕೊಂಡಿದ್ದಾರೆ.


Click it and Unblock the Notifications











