ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 29 ಮಕ್ಕಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದಾರೆ. ನಾವಿನ್ಯತೆ (7), ಸಮಾಜ ಸೇವೆ (4), ಪಾಂಡಿತ್ಯ (1), ಕ್ರೀಡೆ (8), ಕಲೆ ಮತ್ತು ಸಂಸ್ಕೃತಿ (6) ಮತ್ತು ಶೌರ್ಯ (3) ಪ್ರವರ್ಗಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ದೇಶದ ಎಲ್ಲಾ ಪ್ರದೇಶಗಳಿಂದ ಆಯ್ದ ಮಕ್ಕಳಿಗೆ ಪುರಸ್ಕಾರ ನೀಡಲಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ರಾಜ್ಯಗಳಿಗೆ ಸೇರಿದ ಪ್ರಶಸ್ತಿ ವಿಜೇತರಲ್ಲಿ 15 ಬಾಲಕರು ಮತ್ತು 14 ಬಾಲಕಿಯರು ಸೇರಿದ್ದಾರೆ.

ದೇಶದಲ್ಲಿ ಕೋವಿಡ್-19ರಿಂದಾಗಿ ಹಿಂದೆಂದೂ ಕಾಣದಂತಹ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಭೌತಿಕ ಸಮಾರಂಭವನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಮಕ್ಕಳ ಅಸಾಧಾರಣ ಕಾರ್ಯಗಳನ್ನು ಅಭಿನಂದಿಸಲು ಮತ್ತು ಪ್ರೇರೇಪಿಸಲು, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸಂದರ್ಭದಲ್ಲಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಒಂದು ವರ್ಚುವಲ್ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಪಿ.ಎಂ.ಆರ್.ಬಿ.ಪಿ. 2021 ಮತ್ತು 2022ರ ಪ್ರಶಸ್ತಿ ವಿಜೇತರು, ಅವರ ಪೋಷಕರು ಮತ್ತು ಸಂಬಂಧಿತ ಜಿಲ್ಲಾಧಿಕಾರಿಗಳೊಂದಿಗೆ ತಮ್ಮ ಜಿಲ್ಲಾ ಕೇಂದ್ರದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಲೆ ಮತ್ತು ಸಂಸ್ಕೃತಿಯ ವಿಭಾಗದಲ್ಲಿ ಕರ್ನಾಟಕದ ರೆಮೋನಾ ಎವೆಟ್ಟಿ ಪೆರೇರಾ ಮತ್ತು ಸಯ್ಯದ್ ಫತೇನ್ ಅಹ್ಮದ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳೂರು ಫಳ್ನೀರ್ ನಿವಾಸಿ, ನಂತೂರು ಪಾದುವಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರೆಮೋನಾ ಇವೆಟ್ಟ ಪಿರೇರಾಗೆ 2021ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಕುಮಾರಿ ರೆಮೋನಾ ಎವೆಟ್ಟೆ ಪೆರೇರಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು ಭಾರತೀಯ ನೃತ್ಯದ ಬಗ್ಗೆ ಅವರಿಗಿರುವ ಉತ್ಸಾಹದ ಬಗ್ಗೆ ಚರ್ಚಿಸಿದರು. ಈ ಸ್ಫೂರ್ತಿಯನ್ನು ಮುಂದುವರಿಸಲು ಅವರು ಎದುರಿಸಿದ ತೊಡಕುಗಳ ಬಗ್ಗೆ ವಿಚಾರಿಸಿದರು. ಮಗಳ ಕನಸುಗಳನ್ನು ಸಾಕಾರಗೊಳಿಸಲು ತಮಗೆ ಎದುರಾದ ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರ ತಾಯಿಯನ್ನು ಅಭಿನಂದಿಸಿದರು. ರೆಮೋನಾ ಅವರ ಸಾಧನೆಗಳು ಅವರ ವಯಸ್ಸಿಗಿಂತ ಬಹಳ ದೊಡ್ಡದಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಆಕೆಯ ಕಲೆ ಶ್ರೇಷ್ಠ ದೇಶದ ಶಕ್ತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ ಎಂದು ಹೇಳಿದರು.
ಭರತನಾಟ್ಯ ಕಲಾವಿದೆಯಾಗಿರುವ ಈಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್- ಲಂಡನ್ ಅಲ್ಲದೇ, ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಸಾಧಾರಣ ಪ್ರತಿಭಾ ಪುರಸ್ಕಾರ- 2017, ರಾಜ್ಯ ಸರಕಾರದಿಂದ ಬಾಲ ಗೌರವ ಪ್ರಶಸ್ತಿ- 2022 ಲಭಿಸಿವೆ. ಭಾರತದ ಇಂಟರ್ನ್ಯಾಷನಲ್ ಗ್ರೂವ್ ಫೆಸ್ಟ್- 2021 ವಿಜೇತೆಯಾಗಿರುವ ಈಕೆ ದೇಶದ 16 ರಾಜ್ಯಗಳಲ್ಲಿ ಸ್ಪರ್ಧಿಸಿ 20 ಬಹುಮಾನಗಳನ್ನು ಪಡೆದುಕೊಂಡಿದ್ದಾಳೆ.
ಸಯದ್ ಫತೀಮ್ ಅಹ್ಮದ್ ಬೆಂಗಳೂರಿನ ಸಂವೇದ್ ಶಾಲೆಯ ವಿದ್ಯಾರ್ಥಿ. ವೆಸ್ಟ್ರನ್ ಕ್ಲಾಸಿಕಲ್ ಪಿಯಾನೊ ನುಡಿಸುವುದರಲ್ಲಿ ಪ್ರಶಸ್ತಿ ಬಂದಿದೆ. 17 ಕ್ಕೂ ಹೆಚ್ಚಿನ ದೇಶಗಳಲ್ಲಿ ಪಿಯಾನೊ ನುಡಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಲಂಡನ್ ಆರ್ಟ್ ಕಾಲೇಜ್ ಪದವಿ ಪಡೆದ ಅತೀ ಕಿರಿಯ ವ್ಯಕ್ತಿ ಎನ್ನುವ ಕೀರ್ತಿ ಇವರದ್ದು.