ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ತಂದೆ, ತಾಯಿ, ಪೋಷಕರು ಹಾಗೂ ಅವರ ಸಂಬಂಧಿಕರು ಕೋವಿಡ್-19 ಸಮಸ್ಯೆಯಿಂದಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಿಲ್ಲ, ಬದಲಾಗಿ ಪೂರಕ ಪರೀಕ್ಷೆ ವೇಳೆ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.

ಈ ವರ್ಷ ಕೊರೋನಾ ಲಾಕ್‌ಡೌನ್ ನಿಂದಾಗಿ ಮುಂದೂಡಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದೇ ಜೂನ್ 25 ರಿಂದ ಜುಲೈ 4ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಜೂಮ್ ತಂತ್ರಾಂಶದ ಮೂಲಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,''ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳ ಆದೇಶದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪರೀಕ್ಷೆಗೆ ಮುಂಚೆ ಮೂರು ದಿನ ಇರುವವರೆಗೂ, ಪರೀಕ್ಷಾ ಕೇಂದ್ರಗಳ ಬದಲಾವಣೆಗೆ ಆಯ್ಕೆಗಳನ್ನು ಇಟ್ಟುಕೊಂಡಿದ್ದೇವೆ'' ಎಂದು ತಿಳಿಸಿದ್ದಾರೆ.
''ಪರೀಕ್ಷಾ ಕೇಂದ್ರದಲ್ಲಿ ನೂಕುನುಗ್ಗಲಾಗದಂತೆ ತಡೆಯಲು ಎಲ್ಲಾ ಸಿಬ್ಬಂದಿಗಳು ಬೆಳಗ್ಗೆ 7 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಮಕ್ಕಳನ್ನು ಪರೀಕ್ಷಿಸಿ, ಕೊಠಡಿಗಳಲ್ಲಿ ಕೂರಿಸುವ ಕೆಲಸ ಮಾಡಲಿದ್ದಾರೆ. ಮಲೆನಾಡು ಹಾಗೂ ಇತರೆ ಪ್ರದೇಶಗಳಲ್ಲಿ ಮಳೆ ಬಂದರೆ, ವಿದ್ಯಾರ್ಥಿಗಳನ್ನು ನೇರವಾಗಿ ಪರೀಕ್ಷಾ ಕೊಠಡಿಗಳಿಗೆ ಕರೆದುಕೊಂಡು ಹೋಗಿ ನಂತರ ತಪಾಸಣೆ ನಡೆಸಲಾಗುವುದು'' ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.


Click it and Unblock the Notifications











