ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಸಕ್ತ ಸಾಲಿನ ಬಿ.ಇ ಆರ್ಕಿಟೆಕ್ಚರ್ ಪ್ರವೇಶಾತಿ ಸಂಬಂಧಿಸಿದಂತೆ ರ್ಯಾಂಕ್ ಪಟ್ಟಿಯನ್ನು ವಿದ್ಯಾರ್ಥಿಗಳು ವಿರೋಧಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಾಧಿಕಾರ ತಡೆಹಿಡಿದಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರ್ಯಾಂಕ್ ಪಟ್ಟಿಯನ್ನು ಅಕ್ಟೋಬರ್ 30,2020ರಂದು ಪ್ರಕಟಿಸಲಾಗಿತ್ತು. ರ್ಯಾಂಕ್ ಪಟ್ಟಿಯನ್ನು ವಿದ್ಯಾರ್ಥಿಯ ಪಿಯುಸಿ/12ನೇ ತರಗತಿಯಲ್ಲಿ ಗಳಿಸಿರುವ ಒಟ್ಟಾರೆಯ ಶೇ.50ರಷ್ಟು ಹಾಗೂ ಜೆಇಇ/ನಾಟಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಅಂಕಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಗಳಿಸಿರುತ್ತಾರೆಯೊ ಅದರ ಶೇ.50 ರಷ್ಟನ್ನು ಸೇರಿಸಿ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.
ಪ್ರಸಕ್ತ ಸಾಲಿನಲ್ಲಿ ಜೆಇಇ ಪರೀಕ್ಷೆಯ ಫಲಿತಾಂಶದ ಎನ್ಟಿಎ ಸ್ಕೋರ್ ಅನ್ನು ಪರ್ಸೆಂಟೈಲ್ ಮಾದರಿಯಲ್ಲಿ ನೀಡಿರುವುದರಿಂದ ಹಾಗೂ ಅದರ ಆಧಾರದಲ್ಲಿ ರ್ಯಂಕ್ ಪಟ್ಟಿಯನ್ನು ಕೆಇಎ ಪ್ರಕಟಿಸಿರುವುದರಿಂದ ವಿದ್ಯಾರ್ಥಿಗಳಿಗೆ ರ್ಯಾಂಕ್ ಗಳಲ್ಲಿ ವ್ಯತ್ಯಾಸ ಉಂಟಾಗಿರುವುದಾಗಿ ಬಹಳಷ್ಟು ವಿದ್ಯಾರ್ಥಿಗಳು ಮನವಿ ನೀಡಿರುವುದರಿಂದ ಹಾಗೂ ಸದರಿ ಫಲಿತಾಂಶವನ್ನು ಮರುಪರಿಶೀಲಿಸಲು ಕೋರಿರುವುದರಿಂದ ಅಕ್ಟೋಬರ್ 30,2020ರಂದು ಬಿ.ಇ. ಆರ್ಕಿಟೆಕ್ಚರ್ ಪ್ರವೇಶಾತಿಗೆ ಸಂಬಂಧಿಸಿದಂತೆ ಪ್ರಕಟಿಸಲಾಗಿರುವ ರ್ಯಾಂಕ್ ಪಟ್ಟಿಯನ್ನು ತಡೆಹಿಡಿಯಲಾಗಿದೆ.
ವಿದ್ಯಾರ್ಥಿಗಳ ಮನವಿ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಂದ ಸ್ಪಷ್ಟಕರಣ ಪಡೆದು ನಂತರ ಸೂಕ್ತ ಕ್ರಮವಹಿಸಲಾಗುವುದು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.