
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯು 2021-22ನೇ ಸಾಲಿನಲ್ಲಿ ಕಳಪೆ ಸೌಲಭ್ಯಗಳನ್ನು ಹೊಂದಿರುವ 6 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುವಂತೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ.
ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ಆದೇಶವು ಅನ್ವಯಿಸಲಿದ್ದು, ಈ ಕಾಲೇಜುಗಳಿಗೆ ಪ್ರವೇಶ ಪಡೆಯದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಈ ಆರು ಕಾಲೇಜುಗಳ ಪೈಕಿ ಬೆಂಗಳೂರಿನಲ್ಲಿ ಮೂರು ಕಾಲೇಜುಗಳಿವೆ, ಇನ್ನುಳಿದ ಕಾಲೇಜುಗಳು ಬೆಳಗಾವಿ, ಚಾಮರಾಜನಗರ ಮತ್ತು ಕೆಜಿಎಫ್ ನಲ್ಲಿವೆ.
6 ಕಾಲೇಜುಗಳ ಹೆಸರುಗಳು ಇಂತಿವೆ :
ಬೆಂಗಳೂರಿನ ಆಲ್ಫಾ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಳಗಾವಿಯ ಶೇಖ್ ಇಂಜಿನಿಯರಿಂಗ್ ಕಾಲೇಜು
ಬೆಂಗಳೂರಿನ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚಾಮರಾಜನಗರದಲ್ಲಿರುವ ಏಕಲವ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೆಜಿಎಫ್ ನಲ್ಲಿ ಶ್ರೀ ವಿನಾಯಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಬಿಟಿಎಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ನಿರ್ವಹಣೆ
ವಿಶ್ವವಿದ್ಯಾನಿಲಯ ಮಾಹಿತಿಯ ಪ್ರಕಾರ ಬೆಂಗಳೂರಿನ ಒಂದು ಮತ್ತು ಬೆಳಗಾವಿಯ ಒಂದು ಕಾಲೇಜು ಹಣಕಾಸಿನ ಸಮಸ್ಯೆಗಳಿಂದಾಗಿ ಸ್ವಂತವಾಗಿ ಮುಚ್ಚಲು ನಿರ್ಧರಿಸಿದವು ಮತ್ತು ಉಳಿದವುಗಳು ನವೀಕರಣಕ್ಕೆ ಅರ್ಜಿಯನ್ನು ಸಲ್ಲಿಸಿರುವುದಿಲ್ಲ.
ಈ ಸಂದರ್ಭದಲ್ಲಿ "ಮೂಲಸೌಕರ್ಯಗಳ ಕೊರತೆ, ಸೀಟುಗಳನ್ನು ತುಂಬುವಲ್ಲಿ ತೊಂದರೆ, ಕಳಪೆ ಗುಣಮಟ್ಟದ ಬೋಧನೆಯಿಂದಾಗಿ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅದಲ್ಲದೇ "ಪದೇ ಪದೇ ನೋಟಿಸ್ ನೀಡಿದ ನಂತರವೂ, ನಾಲ್ಕು ಕಾಲೇಜುಗಳು ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ" ಎಂದು ಅವರು ತಿಳಿಸಿದ್ದಾರೆ.
ವಿಟಿಯು ರಿಜಿಸ್ಟ್ರಾರ್ ಡಾ ಎ ಎಸ್ ದೇಶಪಾಂಡೆ, "ಈ ಕಾಲೇಜುಗಳಿಗೆ ದಾಖಲಾದ ವಿದ್ಯಾರ್ಥಿಗಳ ನಿಖರ ಸಂಖ್ಯೆ ಇನ್ನೂ ಸಿಕ್ಕಿಲ್ಲ ತದನಂತರ ಈ ಆರು ಕಾಲೇಜಿನ ವಿದ್ಯಾರ್ಥಿಗಳನ್ನು ಹತ್ತಿರದ ಕಾಲೇಜುಗಳಿಗೆ ವರ್ಗಾಯಿಸಲಾಗುವುದು" ಎಂದಿದ್ದಾರೆ.
ವಿದ್ಯಾರ್ಥಿಗಳ ವರ್ಗಾವಣೆ ಪ್ರಕ್ರಿಯೆಯ ಸೀಟು ಹಂಚಿಕೆ ಕುರಿತು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ವಿಶ್ವವಿದ್ಯಾಲಯವು ನೋಟಿಸ್ ನಲ್ಲಿ ತಿಳಿಸಿದೆ.
"ಈ ಕಾಲೇಜುಗಳಿಗೆ ಹೊಸದಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದಾದಲ್ಲಿ ವಿಶ್ವವಿದ್ಯಾನಿಲಯವು ಜವಾಬ್ದಾರರಾಗಿರುವುದಿಲ್ಲ" ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಕಳೆದ ಎರಡು ವರ್ಷಗಳಲ್ಲಿ ವಿಟಿಯು ಅಡಿಯಲ್ಲಿ 12 ಕಾಲೇಜುಗಳನ್ನು ಮುಚ್ಚಲಾಗಿದೆ. 2018-19 ಮತ್ತು 2019-20ರ ಅವಧಿಯಲ್ಲಿ ಆರು ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲಾಯಿತು.


Click it and Unblock the Notifications











