ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನವನ್ನು "ಇಂಜಿನಿಯರ್ಸ್ ಡೇ" ಎಂದು ಆಚರಿಸಲಾಗುತ್ತದೆ. ದೇಶಕ್ಕೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಂದು ನಾಡಿನಾದ್ಯಂತ ಶಾಲಾ-ಕಾಲೇಜು, ಕಚೇರಿಗಳಲ್ಲಿ, ವಿವಿಧ ಇಲಾಖೆಗಳಲ್ಲಿ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.
ಸರ್ ಎಂ ವಿಶ್ವೇಶ್ವರಯ್ಯರವರ ಹಿನ್ನೆಲೆ:
ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ 15,1861 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಬ್ರಾಹ್ಮಣ ಕುಟುಂಬದಲ್ಲಿ. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. 1881ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
ವಿಶ್ವೇಶ್ವರಯ್ಯನವರು ನಂತರ 1884 ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು ಆನಂತರ ಭಾರತದ ನೀರಾವರಿ ಮಂಡಲಿಯಲ್ಲಿ ಸೇವೆಗೆ ಸೇರಿ ದಖನ್ ಪ್ರಾಂತ್ಯದಲ್ಲಿ ಅತ್ಯುತ್ತಮ ನೀರಾವರಿ ಪದ್ಧತಿಯನ್ನು ಜಾರಿಗೆ ತಂದರು. 1903ರಲ್ಲಿ ಅವರು ಪುಣೆಯ ಹತ್ತಿರದ ಖಡಕ್ ವಾಸ್ಲಾ ರಿಸರ್ವಾಯರ್ ನಲ್ಲಿ ಸ್ವಯಂಚಾಲಿತ ನೀರು ಬಿಡುವ ಗೇಟ್ ನಿರ್ಮಿಸಿದರು. ನಂತರ ಇದನ್ನೇ ಗ್ವಾಲಿಯರ್ನ ಟೈಗ್ರಾ ಅಣೆಕಟ್ಟು ಮತ್ತು ಮೈಸೂರಿನ ಕೆಆರ್ಎಸ್ಗೂ ಅಳವಡಿಸಿದರು. ಇಂತಹ ಪದ್ಧತಿಯನ್ನು ಲಕ್ನೋ, ವಿಶಾಖಪಟ್ಟಣಗಳಲ್ಲಿ ಅಳವಡಿಸಿ ಅದರಿಂದ ಸಂಪೂರ್ಣ ಯಶಸ್ಸು, ಕೀರ್ತಿ ಗಳಿಸಿದರು.
ಸೆಪ್ಟೆಂಬರ್ 15 ರಂದು ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಾರ್ಯಕ್ರಮದಲ್ಲಿ ವಿಶೇಷ ಪಾತ್ರ ವಹಿಸುವುದು ಅಂದಿನ ಭಾಷಣ. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಭಾಷಣವು ಅರ್ಥಪೂರ್ಣವಾಗಿದ್ದಷ್ಟು, "ಇಂಜಿನಿಯರ್ಸ್ ಡೇ" ಗೆ ಕಳೆ ಬರುತ್ತದೆ. ಈ ದಿನದಂದು ಕಾರ್ಯಕ್ರಮಗಳಲ್ಲಿ ಮಕ್ಕಳು ಹೇಗೆ ಭಾಷಣ ಎಂಬುದಕ್ಕೆ ಇಲ್ಲಿ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ.
ಭಾಷಣ ಹೇಗಿರಬೇಕು?:
ಭಾಷಣ ಯಾರೇ ಮಾಡಿದರು ಇಂಜಿನಿಯರ್ಸ್ ದಿನದ ಹಿನ್ನೆಲೆಯನ್ನು ಚೆನ್ನಾಗಿ ಅರಿತಿರಬೇಕು ಮತ್ತು ಭಾಷಣಕ್ಕೆ ನೀಡಿರುವ ಕಾಲಾವಕಾಶದ ಬಗ್ಗೆ ಗಮನವಿರಬೇಕು. ಇಂಜಿನಿರ್ಸ್ ದಿನದ ಇತಿಹಾಸ, ಸರ್ ಎಂ ವಿಶ್ವೇಶ್ವರಯ್ಯ ರವರ ಜೀವನ ಚರಿತ್ರೆ, ಅವರ ಕೊಡುಗೆ ಮತ್ತು ಆಚರಣೆಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಭಾಷಣದ ಆರಂಭವನ್ನು ಕತೆ ಅಥವಾ ಉದಾಹರಣೆಗಳೊಂದಿಗೆ ಅರಂಭಿಸುವುದು ಸೂಕ್ತ. ಏಕೆಂದರೆ ಆರಂಭದಲ್ಲಿಯೇ ಕೇಳುಗರನ್ನು ನೀವು ಹಿಡಿದಿಟ್ಟುಕೊಳ್ಳಬಹುದು. ಅದಕ್ಕಾಗಿ ನೀವು ಭಾಷಣಕ್ಕೆ ಸಿದ್ದತೆ ನಡೆಸುವಾಗಲೇ ಚಿಕ್ಕ ಟಿಪ್ಪಣಿಗಳನ್ನು ಸಿದ್ದ ಮಾಡಿಕೊಳ್ಳಬೇಕಾಗುತ್ತದೆ.
ಸ್ಪಷ್ಟ ಮಾಹಿತಿಗಳನ್ನು ಇಟ್ಟುಕೊಂಡು ಉದಾಹರಣೆಗಳನ್ನು ನೀಡುತ್ತ ಮಾತನಾಡುತ್ತಿದ್ದರೆ ಎಂಥವರಿಗೂ ನಿಮ್ಮ ಭಾಷಣದ ಮೇಲೆ ಆಸಕ್ತಿ ಮೂಡುತ್ತದೆ. ಅನೇಕ ಕುತೂಹಲಕಾರಿ ವಿಷಯಗಳನ್ನು ಬರೆದಿಟ್ಟುಕೊಂಡು ಭಾಷಣದ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ.
ಉತ್ತಮ ಉದಾಹರಣೆಗಳು ಮತ್ತು ಉಕ್ತಿಗಳನ್ನು ನೀಡುವ ಮೂಲಕವೂ ಭಾಷಣ ಮಾಡಬಹುದು. ಭಾಷಣದಲ್ಲಿ ಇನ್ನು ಇತ್ತೀಚಿನ ದಿನಗಳಲ್ಲಿ ದೇಶದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸೇರಿಸಿಕೊಂಡರೆ ಮಕ್ಕಳಿ ಗೆ ಪ್ರೇರಣೆ ಜೊತೆಗೆ ಮಾಹಿತಿ ಕೂಡ ನೀಡಿದಂತಾಗುತ್ತದೆ.
ಇಂಜಿನಿಯರ್ಸ್ ದಿನದ ಹಿನ್ನೆಲೆ:
ಸೆ.15ರಂದು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಇವರ ಜನ್ಮ ದಿನವನ್ನು ಇಂಜಿನಿಯರ್ ದಿನವಾಗಿ ಆಚರಿಸಲಾಗುತ್ತದೆ.