ವಿದ್ಯಾರ್ಥಿಗಳ ಬದುಕಿಗೆ ಪ್ರಮುಖ ಸಂಗತಿ ಅಂದರೆ ಓದು, ಪುಸ್ತಕ ಮತ್ತು ಪೆನ್ನುಗಳು ಹಾಗೆಯೇ ವರ್ಷಾಂತ್ಯದಲ್ಲಿ ಸಿಗುವ ಬೇಸಿಗೆ ರಜೆ. ಹೌದು ಎಲ್ಲಾ ವಿದ್ಯಾರ್ಥಿಗಳೂ ಈ ರಜೆ ಅಂದ್ರೆ ಪುಸ್ತಕಗಳನ್ನು ಬದಿಗಿಡುವುದು ಎಂದೇ ಅರ್ಥೈಸಿಕೊಂಡಿರುತ್ತಾರೆ. ಆದರೆ ಈ ರಜೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿಭಿನ್ನ ರೀತಿಯಲ್ಲಿ ತಯಾರಿಯನ್ನು ನಡೆಸಬಹುದು. ಅದ್ಹೇಗೆ ಎಂದರೆ ಪ್ರಥಮ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿರುವ ವಿದ್ಯಾರ್ಥಿಗಳು ತರಗತಿ ಪ್ರಾರಂಭವಾಗುವ ಮುನ್ನ ರಜೆಯಲ್ಲಿ ಹೇಗೆ ತಯಾರಿಯನ್ನು ನಡೆಸಬಹುದು ಎನ್ನುವುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ದ್ವಿತೀಯ ಪಿಯುಸಿ ಪಠ್ಯಕ್ರಮವನ್ನು ತಿಳಿಯಿರಿ:
ವಿದ್ಯಾರ್ಥಿಗಳು ತರಗತಿ ಪ್ರಾರಂಭವಾಗುವ ಮುನ್ನ ದ್ವಿತೀಯ ಪಿಯುಸಿಯ ಪಠ್ಯಕ್ರಮವನ್ನು ತಿಳಿಯುವ ಪ್ರಯತ್ನ ಮಾಡಬಹುದು. ಹಿರಿಯ ವಿದ್ಯಾರ್ಥಿಗಳ ಪುಸ್ತಕಗಳನ್ನು ಕಲೆಹಾಕುವುದು ಮತ್ತು ಅವರ ನೋಟ್ಸ್ ಗಳನ್ನು ಕಲೆಹಾಕಿ ಅವುಗಳಲ್ಲಿ ಯಾವೆಲ್ಲಾ ವಿಷಯಗಳನ್ನು ಒಳಗೊಂಡಿದೆ ಎಂಬುದರ ಬಗೆಗೆ ಗಮನವಹಿಸಬಹುದು. ಇದರಿಂದ ವಿಷಯಗಳ ಬಗೆಗೆ ಕುತೂಹಲ ಹೆಚ್ಚುತ್ತದೆ ಮತ್ತು ವಿಷಯದ ಬಗೆಗೆ ತಿಳಿಯುವ ಆಸಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಪಠ್ಯಕ್ರಮವನ್ನು ತಿಳಿಯುವ ಮತ್ತು ಅದರ ಸಂಬಂಧಿತ ಪುಸ್ತಕಗಳನ್ನು ಕಲೆಹಾಕುವುದರಿಂದ ವಿದ್ಯಾಭ್ಯಾಸ ಹಂತದಲ್ಲಿ ಸಹಾಯವಾಗುವುದು.
ಪ್ರಮುಖ ವಿಷಯಗಳನ್ನು ನೋಟ್ ಮಾಡಿ:
ವಿದ್ಯಾರ್ಥಿಗಳು ಪಠ್ಯಕ್ರಮವನ್ನು ಕಲೆಹಾಕಿ ಅದರಲ್ಲಿರುವ ಫಾರ್ಮುಲಾ ಮತ್ತು ಪ್ರಮುಖ ವಿಷಯಗಳನ್ನು ನೋಟ್ ಮಾಡಿಕೊಳ್ಳಬಹುದು. ಇದರಿಂದ ಅಧ್ಯಯನ ದಿನಗಳಲ್ಲಿ ಓದಿಗೆ ಹೆಚ್ಚು ಸಹಾಯವಾಗುವುದು ಮತ್ತು ಸಮಯ ಉಳಿತಾಯವಾಗುವುದು.
ಹಿಂದಿನ ವರುಷದ ಪ್ರಶ್ನೆ ಪತ್ರಿಕೆಗಳನ್ನು ಕಲೆ ಹಾಕಿ:
ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಗಳನ್ನು ಕಲೆಹಾಕುವ ಬದಲು ಈ ರಜೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಕಲೆ ಹಾಕಿ ಯಾವೆಲ್ಲಾ ಪ್ರಶ್ನೆಗಳು ಪದೇ ಪದೇ ಕೇಳಲಾಗಿರುತ್ತದೆ ಎಂಬುದನ್ನು ನೋಟ್ ಮಾಡಿಕೊಳ್ಳಿ. ಇದರಿಂದ ಯಾವ ವಿಷಯಗಳು ಪ್ರಮುಖವಾದುವು ಮತ್ತು ಯಾವ ವಿಷಯಗಳನ್ನು ಹೆಚ್ಚು ಅಭ್ಯಸಿಸಿದರೆ ಉತ್ತಮ ಅಂಕಗಳನ್ನು ಸುಲಭವಾಗಿ ಪಡೆಯಬಹುದು ಎಂಬುದು ತಿಳಿಯುತ್ತದೆ. ಇದರಿಂದ ವಿದ್ಯಾರ್ಥಿಗಳ ಓದಿಗೆ ಇನ್ನಷ್ಟು ಸಹಾಯವಾಗುವುದು.
ಸ್ಟಡಿ ಚಾರ್ಟ್ ಹಾಕಿಕೊಳ್ಳಿ:
ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕೆಂಬ ವಿದ್ಯಾರ್ಥಿಗಳು ವರ್ಷ ಪೂರ್ತಿ ಹೇಗೆ ಓದಬೇಕು ಮತ್ತು ಓದಿಗೆ ಎಷ್ಟು ಸಮಯ ಮತ್ತು ಯಾವ ಸಮಯವನ್ನು ಮೀಸಲಿಡಬೇಕು ಎನ್ನುವ ಸ್ಟಡಿ ಚಾರ್ಟ್ ಹಾಕಿಕೊಳ್ಳಿ. ಇದನ್ನು ಮುಂಚಿತವಾಗಿ ಪ್ಲ್ಯಾನ್ ಮಾಡುವುದರಿಂದ ತರಗತಿ ಆರಂಭವಾದ ದಿನಗಳಿಂದಲೇ ಅಭ್ಯಾಸದಲ್ಲಿ ಕೈಗೊಳ್ಳಲು ಸಹಾಯಕವಾಗುವುದು ಮತ್ತು ಸಮಯ ಕಳೆದ ನಂತರ ಚಿಂತಿಸುವುದಕ್ಕಿಂತ ಅಂದಿನ ದಿನದ ಪಾಠವನ್ನು ಅಂದೇ ಓದಿ ಮುಗಿಸಬಹುದು.
ಟೈಂ ಮ್ಯಾನೇಜ್ಮೆಂಟ್ ಬಗ್ಗೆ ಪ್ಲಾನ್ ಮಾಡಿ:
ವಿದ್ಯಾರ್ಥಿಗಳು ಓದಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೋ ಅಷ್ಟೇ ಪ್ರಾಮುಖ್ಯತೆಯನ್ನು ಟೈಂ ಮ್ಯಾನೇಜ್ಮೆಂಟ್‌ಗೆ ನೀಡಬೇಕಿರುತ್ತದೆ. ಯಾಕೆಂದರೆ ವಿದ್ಯಾರ್ಥಿಗಳು ತರಗತಿಯಲ್ಲಿ ಏನೆಲ್ಲಾ ಕಲಿಯುತ್ತಾರೆ ಅದನ್ನ ಅಂದೇ ಅಭ್ಯಸಿಸಲು ಟೈಂ ಮ್ಯಾನೇಜ್ಮೆಂಟ್ ಕಲಿಕೆಯು ಅಷ್ಟೇ ಮುಖ್ಯವಾಗಿರುತ್ತದೆ. ಈ ಟೈಂ ಮ್ಯಾನೇಜ್ಮೆಂಟ್ ಅನ್ನು ಪರೀಕ್ಷಾ ಸಮಯದಲ್ಲಿ ಮಾತ್ರವಲ್ಲದೇ ವರ್ಷವಿಡೀ ಫಾಲೋ ಮಾಡಿದ್ದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ.ಹಾಗಾಗಿ ವಿದ್ಯಾರ್ಥಿಗಲು ತಮ್ಮ ದಿನನಿತ್ಯ ಚಟುವಟಿಕೆಗಳ ಜೊತೆಗೆ ತಮ್ಮ ಓದಿಗೆ ಗಮನಹರಿಸಬೇಕಿರುವುದರಿಂದ ಈಗಿನಿಂದಲೇ ಟೈಂ ಮ್ಯಾನೇಜ್ಮೆಂಟ್ ಬಗೆಗೆ ಹೆಚ್ಚಿನ ಗಮನ ಹರಿಸುವುದು ಒಳಿತು.


Click it and Unblock the Notifications











