ಪ್ರತಿಯೊಬ್ಬರಿಗೂ ತಾನು ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಹಠ ಇರುತ್ತದೆ ಹಾಗಾಗಿ ಉತ್ತಮ ಕನಸುಗಳನ್ನು ಹೊತ್ತಿರುತ್ತಾರೆ. ಕಷ್ಟ ಪಟ್ಟು ಓದಿ ಚೆನ್ನಾಗಿ ಅಂಕಗಳಿಸಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕಲು ಪ್ರಾರಂಭಿಸಿದಾಗ ಕೇವಲ ನಿರಾಸೆಗಳು ಎದುರಾಗುತ್ತವೆ. ಎಲ್ಲಿಯಾದರೂ ಹುದ್ದೆ ಖಾಲಿ ಇದ್ದರೆ ಅರ್ಜಿ ಸಲ್ಲಿಸಿದಾಗ ಸಂದರ್ಶನಕ್ಕೆ ಹೋದಾಗ ಅಲ್ಲಿ ಯಾವುದೋ ಒಂದು ಕೊರತೆ ಇಂದ ರಿಜೆಕ್ಟ್ ಆಗಿ ಬಿಡಬಹುದು ಅಥವಾ ನಿಮಗೆ ಅವರು ಆಫರ್ ಮಾಡುವ ವೇತನ ಇಷ್ಟ ಆಗದಿರಬಹುದು. ಹೀಗೆ ಹಲವಾರು ಕಾರಣಗಳಿಂದ ನಿಮಗೆ ನಿಮ್ಮಿಷ್ಟದ ಜಾಬ್ ಸಿಕ್ಕಿಲ್ಲ ಅಂತ ಬೇಜಾರಾಗಿದ್ರೆ ಹೀಗೆ ಮಾಡಿ.

ನಿಮ್ಮ ಬಗ್ಗೆ ನೀವು ಮೊದಲು ಅಧ್ಯಯನ ಮಾಡಿ:
ಓದಿದ ತಕ್ಷಣವೇ ಯಾರಿಗೂ ಉದ್ಯೋಗ ಸಿಗುವುದಿಲ್ಲ ಅದು ತಿಳಿದಿರುವ ವಿಚಾರ. ಆದರೆ ಉತ್ತಮ ವಿದ್ಯಾರ್ಹತೆಯನ್ನು ಹೊಂದಿದ್ದು ಅನೇಕ ಪ್ರಯತ್ನಗಳ ನಡುವೆಯೂ ನಿಮಗೆ ನಿಮ್ಮ ಇಷ್ಟದ ಉದ್ಯೊಗ ಸಿಗುತ್ತಿಲ್ಲ ಎಂದಾದರೆ ಮೊದಲು ನಿಮ್ಮನ್ನು ಅಧ್ಯಯನ ಮಾಡಿ. ಯಾಕೆ ಉದ್ಯೋಗ ಸಿಗುತ್ತಿಲ್ಲ? ಎಲ್ಲಿ ಸಮಸ್ಯೆ ಇದೆ? ನೀವು ನೀಡುವ ರೆಸ್ಯುಮೆಯಲ್ಲಿ ಏನಾದರೂ ತಪ್ಪಾಗಿದೆಯೇ ಅಥವಾ ನೀವು ಸಂದರ್ಶನದಲ್ಲಿ ಉತ್ತರಿಸುವ ರೀತಿ ತಪ್ಪಿದೆಯೇ ಎನ್ನುವ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಿ ನಂತರ ಸಮಸ್ಯೆ ನಿಮ್ಮಲ್ಲಿಯೇ ಇದ್ದರೆ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿ.
ಉತ್ತಮ ಸಂಪರ್ಕ ಹೊಂದಲು ಪ್ರಯತ್ನಿಸಿ:
ನೀವು ವಿದ್ಯಾವಂತರು ಅಂದಾಕ್ಷಣ ಯಾರೂ ಕರೆದು ಕೆಲಸ ಕೊಡುವುದಿಲ್ಲ ಹಾಗೆಂದು ನಿಮ್ಮಿಷ್ಟದ ಕೆಲಸ ಸಿಕ್ಕಿಲ್ಲ ಎಂದು ದೂರುವುದಲ್ಲ. ಬದಲಾಗಿ ನಿಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಪಡೆಯಲು ಅನೇಕ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಥೆಯ ಉದ್ಯೋಗಿಗಳೊಂದಿಗೆ ಸಂವಹನ ಮಾಡಿ ಅದರಿಂದ ನಿಮ್ಮ ನೆಟ್‌ವರ್ಕ್ ಬೆಳೆಯುತ್ತಾ ಹೋಗುವುದರ ಜೊತೆಗೆ ಅದೃಷ್ಟ ಯಾವಾಗ ಬೇಕಾದರೂ ನಿಮ್ಮ ಕನಸಿನ ಬಾಗಿಲನ್ನು ತಟ್ಟಬಹುದು.
ಸ್ವಂತ ಉದ್ಯೋಗ ಮಾಡಿ :
ನೀವು ನಿಮ್ಮಿಷ್ಟದ ಜಾಬ್ ಸಿಕ್ಕಿಲ್ಲ ಅಂತ ಬೇಜಾರಾಗಿ ಕೂರೂದ್ರಿಂದ ಪ್ರಯೋಜನವಿಲ್ಲ. ಬದಲಿಗೆ ನೀವೆ ಯಾವುದಾದರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ. ಇದರಿಂದ ನಿಮಗೂ ಕೆಲಸದಲ್ಲಿ ತುಡಿತ ಇರುತ್ತದೆ. ಕಷ್ಟ ಪಟ್ಟು ಓದಿ ಉತ್ತಮ ಅಂಕ ಗಳಿಸಿದಂತೆಯೇ ಇಲ್ಲಿಯೂ ಶ್ರಮ ಪಟ್ಟರೆ ನೀವು ಅಂದುಕೊಂಡ ಗುರಿಯನ್ನು ತಲುಪಬಹುದು. ಸ್ವಂತ ಉದ್ಯೋಗ ಪ್ರಾರಂಭಿಸಲು ಸಿದ್ಧರಿದ್ದಲ್ಲಿ ಆಪ್ತರಿಂದ ಸಲಹೆ ಪಡೆಯಿರಿ ಮತ್ತು ಸರ್ಕಾರದಿಂದಲೂ ನೆರವು ತೆಗೆದುಕೊಂಡು ನೀವೂ ಬೆಳೆಯಿರಿ ಮತ್ತು ಇತರರಿಗೂ ಉದ್ಯೋಗವನ್ನು ಸೃಷ್ಟಿ ಮಾಡಿ.
ಬೇರೆ ಜಾಬ್‌ಗಳನ್ನು ಮಾಡಿ:
ನೀವು ಓದಿ ಸರ್ಟಿಫಿಕೇಟ್ ಪಡೆದಾಕ್ಷಣ ನೀವು ಇದೇ ಉದ್ಯೋಗ ಬೇಕು ಎಂದು ಕುಳಿತರೆ ಅದು ಕೆಲವೊಮ್ಮೆ ಸಾಧ್ಯವಾಗದು. ಹಾಗಾಗಿ ನೀವು ನಿಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗುತ್ತಿಲ್ಲ ಎಂದಾಗ ಯಾವ ಉದ್ಯೋಗ ನಿಮಗೆ ಸಿಕ್ಕಿದೆಯೋ ಅದನ್ನು ಮಾಡಲು ಪ್ರಾರಂಭಿಸಿ. ಏಕೆಂದರೆ ಕೆಲಸ ಅಂದ್ಮೇಲೆ ಯಾವುದು ಮೇಲಲ್ಲ ಮತ್ತು ಯಾವುದು ಕೀಳಲ್ಲ ಹಾಗಾಗಿ ನಿಮ್ಮಿಷ್ಟದ ಜಾಬ್ ಸಿಗೋವರೆಗೂ ಸಿಕ್ಕ ಉದ್ಯೋಗವನ್ನು ಮಾಡಿ ದೈನಂದಿನ ಖರ್ಚುಗಳನ್ನು ನಿಭಾಯಿಸಿ.
ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಿ:
ನಿಮ್ಮ ಇಷ್ಟದ ಜಾಬ್ ಸಿಗೋವರೆಗು ನಿಮ್ಮ ಕೌಶಲ್ಯ ಅಭಿವೃದ್ಧಿಸುವ ಅಥವಾ ಉದ್ಯೋಗಕ್ಕೆ ಪೂರಕವಾಗುವ ಯಾವುದಾದರೂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಿ. ಇದರಿಂದ ನಿಮ್ಮ ರೆಸ್ಯುಮೆನಲ್ಲಿ ನಿಮ್ಮ ವಿದ್ಯಾರ್ಹತೆಗಳ ಬಗೆಗೆ ಹೆಚ್ಚು ನಮೂದಿಸುವ ಅವಕಾಶ ದೊರೆತಂತಾಗುತ್ತದೆ ಜೊತೆಗೆ ಸಮಯವನ್ನು ಸದ್ಭಳಕೆ ಮಾಡಿದಂತಾಗುತ್ತದೆ.
ಉನ್ನತ ವ್ಯಾಸಂಗವನ್ನು ಮಾಡಿ:
ನಿಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಇನ್ನೂ ಸಿಕ್ಕಿಲ್ಲ ಅಂದಮೇಲೆ ನೀವು ಮುಂದಿನ ವಿದ್ಯಾಭ್ಯಾಸವನ್ನು ಯಾಕೆ ಮಾಡಬಾರದು ಅಲ್ವೇ?. ಉನ್ನತ ವ್ಯಾಸಂಗದಿಂದ ನಿಮ್ಮ ಕರಿಯರ್‌ಗೆ ಸಹಾಯವಾಗಬಹುದು ಹಾಗಾಗಿ ನೀವು ಉನ್ನತ ಶಿಕ್ಷಣವನ್ನು ಪಡೆದು ನಂತರ ಉದ್ಯೋಗವನ್ನು ಪಡೆಯಬಹುದು.


Click it and Unblock the Notifications











