ಗ್ರಾಮಲೆಕ್ಕಿಗನಾದರೆ ಉತ್ತಮ ವೇತನ ಸಿಗುತ್ತೆ ಮತ್ತು ಗ್ರಾಮಗಳಲ್ಲಿ ಕೆಲಸವನ್ನು ಮಾಡಬಹುದು ಎಂದು ಅನೇಕ ಆಕಾಂಕ್ಷಿಗಳು ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುತ್ತಿರುತ್ತಾರೆ.
ಆದರೆ ನಿಜಕ್ಕೂ ಗ್ರಾಮಲೆಕ್ಕಿಗ ಎಂದರೆ ಯಾರು ? ಅವರ ಕರ್ತವ್ಯಗಳೇನು ? ಗ್ರಾಮಲೆಕ್ಕಿಗರಾಗಲು ಅರ್ಹತೆಗಳೇನು ? ವಯೋಮಿತಿ ಎಷ್ಟಿರಬೇಕು ? ಆಯ್ಕೆ ವಿಧಾನ ಹೇಗಿರತ್ತೆ ? ವೇತನವೆಷ್ಟು ? ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಗ್ರಾಮಲೆಕ್ಕಿಗ ಎಂದರೆ ಯಾರು ಮತ್ತು ಅವರ ಕರ್ತವ್ಯಗಳೇನು ? :
ಗ್ರಾಮಲೆಕ್ಕಿಗ ಎಂದರೆ ಕಂದಾಯ ಇಲಾಖೆಯ ಅಡಿಯಲ್ಲಿ ಗ್ರಾಮಗಳಲ್ಲಿ ಕೆಲಸ ಮಾಡುವವರು. ಗ್ರಾಮಲೆಕ್ಕಿಗರು ಜನರಿಂದ ಶುಲ್ಕಗಳನ್ನು ಪಡೆದುಕೊಂಡು ಸರಕಾರಕ್ಕೆ ಕಟ್ಟುವುದು ಮತ್ತು ರೈತರಿಗೆ ಆರ್ಟಿಸಿ ಬಗ್ಗೆ ವಿಷಯಗಳನ್ನು ತಿಳಿಸುವುದು ಮತ್ತು ಸರ್ವೆ ನಂಬರ್ ಬಗ್ಗೆ ಮಾಹಿತಿಯನ್ನು ಕೊಡುತ್ತಾರೆ ಮತ್ತು ಜಮೀನನ್ನು ಮಾರಾಟ ಮಾಡಲು ಕೂಡ ಸಹಾಯ ಮಾಡುತ್ತಾರೆ. ಹೀಗೆ ವಿವಿಧ ಕರ್ತವ್ಯಗಳಲ್ಲಿ ಗ್ರಾಮಲೆಕ್ಕಿಗ ತೊಡಗಿಕೊಳ್ಳುತ್ತಾರೆ.
ಗ್ರಾಮಲೆಕ್ಕಿಗರಾಗಲು ಅರ್ಹತೆಗಳೇನು ? :
ಗ್ರಾಮಲೆಕ್ಕಿಗರಾಗಲು ಆಸಕ್ತಿ ಹೊಂದಿರುವವರು ದ್ವಿತೀಯ ಪಿಯುಸಿ ಅಥವಾ ಸಿಬಿಎಸ್ಸಿ ಅಥವಾ ಐಸಿಎಸ್ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಗ್ರಾಮಲೆಕ್ಕಿಗರಾಗಲು ವಯೋಮಿತಿಯ ಅರ್ಹತೆಗಳನ್ನು ಕೂಡ ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಕನಿಷ್ಟ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು. ಸಾಮಾನ್ಯ ವರ್ಗದ ಗರಿಷ್ಟ 35 ವರ್ಷ, ಓಬಿಸಿ ವರ್ಗದ ಗರಿಷ್ಟ 38 ವರ್ಷ, ಎಸ್ಸಿಎಸ್ಟಿ ವರ್ಗದ ಗರಿಷ್ಟ 40 ವರ್ಷ, ಅಂಗವಿಕಲ ವರ್ಗದ ಗರಿಷ್ಟ 45 ವರ್ಷ, ವಿಧವಾ ಮಹಿಳೆಯರಿಗೆ ಗರಿಷ್ಟ 45 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ ಜೊತೆಗೆ 3 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಗ್ರಾಮಲೆಕ್ಕಿಗರಿಗೆ ಸಿಗುವ ವೇತನವೆಷ್ಟು ?
ಗ್ರಾಮಲೆಕ್ಕಿಗರ ಸಂಬಳ ಎಷ್ಟಿರುತ್ತದೆ ಎಂದರೆ ತಿಂಗಳಿಗೆ ರೂ.21,400/- ರಿಂದ 42,000/-ರೂಗಳ ವರೆಗೆ ವೇತನವನ್ನು ಕೂಡ ಪಡೆಯಬಹುದು.
ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಹೇಗಿರತ್ತೆ ?
ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅವರು ಪಿಯುಸಿ ಪರೀಕ್ಷೆ ಅಥವಾ ಸಿ.ಬಿ.ಎಸ್.ಇ ಅಥವಾ ಐ.ಸಿ.ಎಸ್.ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು. ಕಿರುಪಟ್ಟಿ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಅಗತ್ಯವಾದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿರುತ್ತದೆ.
ಗ್ರಾಮಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವೆಷ್ಟಿರತ್ತೆ ?
ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ ವರ್ಗ, 2ಎ,2ಬಿ, 3ಎ ಮತ್ತು 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 200/-ರೂ ಮತ್ತು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.
ಗ್ರಾಮಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ ?
ಗ್ರಾಮಲೆಕ್ಕಿಗ ಹುದ್ದೆಯ ನೇಮಕಾತಿ ಅಧಿಸೂಚನೆಯನ್ನು ಓದಿದ ಬಳಿಕ ನೀವು ಮೊದಲು ಆ ಜಿಲ್ಲೆಯ ಅಧಿಕೃತ ವೆಬ್‌ಸೈಟ್ www revenue dept gov in ಗೆ ಭೇಟಿ ನೀಡಬೇಕು. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಗಳಾದ ನಿಮ್ಮ ಹೆಸರು ಮತ್ತು ನಿಮ್ಮ ವಿಳಾಸ ಹಾಗೂ ಜಾತಿ ಆದಾಯ ಪ್ರಮಾಣ ಪತ್ರದ ಮಾಹಿತಿಯನ್ನು ಕೊಡಬೇಕು ಮತ್ತು ಫೋಟೋ ಅಪ್ಲೋಡ್ ಮಾಡಬೇಕು. ಇನ್ಯಾವುದೇ ರೀತಿಯ ದಾಖಲಾತಿಗಳನ್ನು ಅಪ್ಲೋಡ್ ಮಾಡುವಂತಿರುವುದಿಲ್ಲ.
ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳು ಯಾವುದೇ ರೀತಿಯ ಕರೆಗಳನ್ನು ಪಡೆಯುವುದಿಲ್ಲ, ಬದಲಾಗಿ ಆಗಾಗ್ಗೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುತ್ತಿರಬೇಕು. ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಿ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಅಲ್ಲಿ ನಿಮ್ಮ ಹೆಸರಿದ್ದರೆ ಸಂದರ್ಶನ ಪ್ರಕ್ರಿಯೆಗಳಿಗೆ ಹಾಜರಾಗಬೇಕಿರುತ್ತದೆ. ನಂತರದಲ್ಲಿ ನೇಮಕಗೊಂಡ ಅಭ್ಯರ್ಥಿಗಳಿಗೆ ಆರಂಭದಲ್ಲಿ ಕೆಲವು ದಿನಗಳ ಕಾಲ ಟ್ರೈನಿಂಗ್ ಅನ್ನು ಕೂಡ ಕೊಡುತ್ತಾರೆ. ಒಂದು ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ ಗ್ರಾಮಲೆಕ್ಕ ಅಧಿಕಾರಿಯಾಗಿ ನೀವು ಸೆಲೆಕ್ಟ್ ಆದರೆ ಐದು ವರ್ಷಗಳ ಕಾಲ ಒಂದು ಜಿಲ್ಲೆಯಲ್ಲಿ ಕೆಲಸ ಮಾಡಬೇಕು ನಂತರ ನೀವೇನಾದರೂ ಕೆಲಸ ಬಿಡುತ್ತೇನೆ ಅಥವಾ ವರ್ಗಾವಣೆ ಮಾಡಿಸಿಕೊಳ್ಳುತ್ತೇನೆ ಎಂದರೆ ಎರಡು ಲಕ್ಷ ರೂಪಾಯಿಯನ್ನು ಕೊಟ್ಟು ವರ್ಗಾವಣೆ ಅಥವಾ ಕೆಲಸವನ್ನು ಬಿಡಬಹುದು.


Click it and Unblock the Notifications











