ಸಮಾಜವನ್ನು ಕಟ್ಟುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಯುವ ಪೀಳಿಗೆಯನ್ನು ಸನ್ಮಾರ್ಗದಲ್ಲಿ ನಡೆಸುವ ಮಾರ್ಗದರ್ಶಕರೇ ಶಿಕ್ಷಕರು. ಇಂತಹ ಶಿಕ್ಷಕರನ್ನು ದಿನಕ್ಕೆ ಒಮ್ಮೆಯಾದರೂ ನೆನೆಯಲೇಬೇಕು. ಅದರಲ್ಲೂ ವರ್ಷಕ್ಕೆ ಒಮ್ಮೆಯಾದರೂ ಗೌರವಿಸಿ ಸನ್ಮಾನಿಸಲೇಬೇಕು.
ನಮಗೆ ನಿಮಗೆಲ್ಲಾ ಒಬ್ಬರಾದರೂ ಮೆಚ್ಚಿನ ಶಿಕ್ಷಕರಿರುತ್ತಾರೆ. ಅವರಿಗೆ ಅವರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ ವಿಶ್ವ ಶಿಕ್ಷಕರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಶಿಕ್ಷಕರಿಗಾಗಿ ಅವರ ತ್ಯಾಗ ಮತ್ತು ಶ್ರಮಗಳಿಗಾಗಿ ಸಮರ್ಪಿಸಲಾಗಿದೆ. ಬನ್ನಿ ಈ ದಿನದ ಇತಿಹಾಸವೇನು, ಈ ವರ್ಷದ ಥೀಮ್ ಏನು, ಈ ದಿನದ ಮಹತ್ವವೇನು ಮತ್ತು ಈ ದಿನವನ್ನು ಹೇಗೆಲ್ಲಾ ಆಚರಿಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ವಿಶ್ವ ಶಿಕ್ಷಕರ ದಿನ 2022 ಇತಿಹಾಸ :
1994 ರಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಯಿಂದ ಅಕ್ಟೋಬರ್ 5 ಅನ್ನು ವಿಶ್ವ ಶಿಕ್ಷಕರ ದಿನವೆಂದು ಘೋಷಿಸಲಾಯಿತು ಮತ್ತು ಅಂದಿನಿಂದ ಇದನ್ನು ಅಕ್ಟೋಬರ್ 5 ರಂದು ಜಾಗತಿಕವಾಗಿ ಆಚರಿಸಲಾಗುತ್ತಿದೆ.
ಈ ದಿನವು 1966 ರಲ್ಲಿ ILO ಯುನೆಸ್ಕೋ ಶಿಕ್ಷಕರ ಸ್ಥಿತಿಯನ್ನು ಎತ್ತಿ ತೋರಿಸುವ ಶಿಫಾರಸ್ಸನ್ನು ಅಂಗೀಕರಿಸಿದಕ್ಕಾಗಿ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ. ಪ್ಯಾರಿಸ್ ನಲ್ಲಿ ಇದನ್ನು ವಿಶೇಷ ಅಂತರ್ ಸರ್ಕಾರಿ ಸಮ್ಮೇಳನದಲ್ಲಿ ಅಳವಡಿಸಿಕೊಳ್ಳಲಾಯಿತು.
ಯುನೆಸ್ಕೋದ ಅಧಿಕೃತ ವೆಬ್‌ಸೈಟ್: "ಈ ಶಿಫಾರಸ್ಸು ಶಿಕ್ಷಕರ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಹಾಗೂ ಅವರ ಪ್ರಾಥಮಿಕ ಸಿದ್ಧತೆ ಮತ್ತು ಮುಂದಿನ ಶಿಕ್ಷಣ, ನೇಮಕಾತಿ, ಉದ್ಯೋಗ, ಬೋಧನೆ ಮತ್ತು ಕಲಿಕಾ ಪರಿಸ್ಥಿತಿಗಳಿಗಾಗಿ ಅಂತರಾಷ್ಟ್ರೀಯ ಮಾನದಂಡಗಳನ್ನು ಒದಗಿಸುತ್ತದೆ."
1997 ರಲ್ಲಿ ಇದನ್ನು ಅಳವಡಿಸಿಕೊಂಡ ನಂತರ, ಯುನೆಸ್ಕೋ ಸಾಮಾನ್ಯ ಸಮ್ಮೇಳನವು ಉನ್ನತ-ಶಿಕ್ಷಣ ಬೋಧನಾ ಸಿಬ್ಬಂದಿಯ ಸ್ಥಾನಮಾನಕ್ಕಾಗಿ ಯುನೆಸ್ಕೋ ಶಿಫಾರಸನ್ನು ಅಂಗೀಕರಿಸಿತು.
ವಿಶ್ವ ಶಿಕ್ಷಕರ ದಿನ 2022 ಮಹತ್ವ :
ಶಿಕ್ಷಕರ ಹಕ್ಕುಗಳು ಮತ್ತು ಜವಾಬ್ದಾರಿಗಳೆಡೆಗೆ ಕೆಲಸ ಮಾಡಲು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ವಿಶ್ವದಾದ್ಯಂತ ಶಿಕ್ಷಕರ ಸ್ಥಿತಿಯನ್ನು ನಿರ್ಣಯಿಸುವುದು, ಪ್ರಶಂಸಿಸುವುದು ಮತ್ತು ಸುಧಾರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಅಲ್ಲದೇ ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಈ ದಿನ ಸಹಾಯ ಮಾಡುತ್ತದೆ.
ಈ ದಿನವು ನೇಮಕಾತಿ, ತರಬೇತಿ ಮತ್ತು ಶಿಕ್ಷಕರ ಶಿಕ್ಷಣದ ಸಮಸ್ಯೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತದೆ. ಈ ಸವಾಲುಗಳನ್ನು ಜಯಿಸಲು ಮತ್ತು ಅವರ ಪ್ರಗತಿಯನ್ನು ಗುರುತಿಸಲು ಈ ದಿನವು ಹೆಚ್ಚು ಮಹತ್ವವನ್ನು ಹೊಂದಿದೆ.
ವಿಶ್ವ ಶಿಕ್ಷಕರ ದಿನವು ಪ್ರಪಂಚದಾದ್ಯಂತ ಶಿಕ್ಷಕರ ಪರಿಸ್ಥಿತಿಗಳು ಮತ್ತು ಉದ್ಯೋಗಾವಕಾಶಗಳ ಕುರಿತು ಹಾಗೂ ಅವರು ತಾರತಮ್ಯಕ್ಕೊಳಗಾಗುವ ವಿಧಾನಗಳ ಮೇಲೆ ಬೆಳಕು ಚೆಲ್ಲುತ್ತದೆ. ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಈ ದಿನವು ಮಹತ್ವದ್ದಾಗಿದೆ.
ವಿಶ್ವ ಶಿಕ್ಷಕರ ದಿನ 2022 ಥೀಮ್ :
ಈ ವರ್ಷದ ಥೀಮ್ "ಶಿಕ್ಷಣ ಚೇತರಿಕೆಯ ಹೃದಯಭಾಗದಲ್ಲಿರುವ ಶಿಕ್ಷಕರು". ಪ್ರಪಂಚವು ಒಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಈ ಥೀಮ್ ತುಂಬಾ ಸೂಕ್ತವಾಗಿದೆ. ಸಾಂಕ್ರಾಮಿಕದ ಮಧ್ಯದಲ್ಲಿ, ಶಿಕ್ಷಕರು ನಿಜವಾಗಿಯೂ ಶಿಕ್ಷಣ ಚೇತರಿಕೆಯ ಹೃದಯಭಾಗದಲ್ಲಿದ್ದಾರೆ.
ಕೋವಿಡ್ -19 ರ ಸಮಯದಲ್ಲಿ ಜಗತ್ತು ಡಿಜಿಟಲ್ ಆಗಿರುವುದರಿಂದ ಶಿಕ್ಷಕರು ವಿವಿಧ ಸವಾಲುಗಳನ್ನು ಎದುರಿಸಿದ್ದಾರೆ ಅದರ ನಡುವೆಯೂ ಮುನ್ನಡೆದಿದ್ದಾರೆ. ಆರಂಭದಿಂದಲೂ ಶಿಕ್ಷಕರು ಸಂಪರ್ಕದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡುಬಂದಿದೆ. ಅನೇಕ ಮಕ್ಕಳೊಂದಿಗೆ ಪರದೆಯ ಮೇಲೆ ಏಕಕಾಲದಲ್ಲಿ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಹೆಚ್ಚು ತಾಂತ್ರಿಕ ಜ್ಞಾನವಿಲ್ಲದ ಶಿಕ್ಷಕರು ಅನೇಕ ಸವಾಲುಗಳನ್ನು ಎದುರಿಸಿಯೂ ಯಶಸ್ವಿಯಾಗಿದ್ದಾರೆ.
ಈ ಎಲ್ಲದರ ಹೊರತಾಗಿಯೂ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಾದ ತರಗತಿಗಳನ್ನು ಒದಗಿಸಿದ್ದಾರೆ ಮತ್ತು ಅವರಿಗೆ ಪ್ರತ್ಯೇಕವಾಗಿ ಹಾಜರಾಗುವಂತೆ ಸಲಹೆಗಳನ್ನು ನೀಡಿ ಶಿಕ್ಷಣ ನೀಡಿದ್ದಾರೆ. 24X7 ನಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕಗೆ ಶಿಕ್ಷಕರಿಗೆ ಸಲ್ಲುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಶಿಕ್ಷಕರ ಎಲ್ಲಾ ಕೊಡುಗೆಗಳನ್ನು ಮತ್ತು ಶಿಕ್ಷಕರು ಮಾಡಿದ ಶ್ರಮವನ್ನು ಈ ವರ್ಷದ ಥೀಮ್ ನೆನಪಿಸುತ್ತದೆ.
ಹಿಂದಿನ ವರ್ಷದ ಥೀಮ್ ಗಳು:
2020- "ಶಿಕ್ಷಕರು: ಬಿಕ್ಕಟ್ಟಿನಲ್ಲಿ ಮುನ್ನಡೆ, ಭವಿಷ್ಯವನ್ನು ಮರು ರೂಪಿಸಿಕೊಳ್ಳುವುದು"
2019- "ಯುವ ಶಿಕ್ಷಕರು: ವೃತ್ತಿಯ ಭವಿಷ್ಯ"
2018- "ಶಿಕ್ಷಣದ ಹಕ್ಕು ಎಂದರೆ ಅರ್ಹ ಶಿಕ್ಷಕನ ಹಕ್ಕು"
2017- "ಶಿಕ್ಷಕರಿಗೆ ಅಧಿಕಾರ ನೀಡುವುದು"
ವಿಶ್ವ ಶಿಕ್ಷಕರ 2022 ದಿನವನ್ನು ಆಚರಿಸುವುದು ಹೇಗೆ ?:
* ನಿಮ್ಮ ಶಿಕ್ಷಕರಿಗೆ ಕರೆ ಮಾಡಿ ಮತ್ತು ಅವರಿಗೆ ಧನ್ಯವಾದಗಳನ್ನು ತಿಳಿಸಿ ಅಥವಾ ಇನ್ನೂ ಉತ್ತಮವಾದ ಚಿಂತನೆ ಮಾಡಿ ಉಡುಗೊರೆಯೊಂದಿಗೆ ಅವರನ್ನು ಭೇಟಿ ಮಾಡಿ.
* ನಿಮ್ಮ ನೆಚ್ಚಿನ ಶಿಕ್ಷಕರಿಗಾಗಿ ಪಾರ್ಟಿ ಮಾಡಿ ಮತ್ತು ಅವರನ್ನು ಅಚ್ಚರಿಗೊಳಿಸಿ.
* ಸ್ಥಳೀಯ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಕೆಲವು ದೇಣಿಗೆಗಳನ್ನು ನೀಡಿ.
* ಶಿಕ್ಷಣದ ಸ್ಥಳೀಯ NGO ಗೆ ಭೇಟಿ ನೀಡಿ ಮತ್ತು ಶಿಕ್ಷಕರನ್ನು ಪ್ರಶಂಸಿಸಿ ಮತ್ತು ಅವರ ನಿಸ್ವಾರ್ಥ ಸೇವೆಗಾಗಿ ಅವರನ್ನು ಶ್ಲಾಘಿಸಿ.
ಕೆಲವು ಆಸಕ್ತಿಕರ ಸಂಗತಿಗಳು :
* 1931 ರಲ್ಲಿ ಚೀನಾದ ರಾಷ್ಟ್ರೀಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನ ಆರಂಭವಾಯಿತು. ಇದನ್ನು 1932 ರಲ್ಲಿ ಅನುಮೋದಿಸಲಾಯಿತು ಮತ್ತು 1939 ರಲ್ಲಿ ಕನ್ಫ್ಯೂಷಿಯಸ್ ಜನ್ಮದಿನದಂದು ಆಗಸ್ಟ್ 27 ಅನ್ನು ಶಿಕ್ಷಕರ ದಿನವೆಂದು ಘೋಷಿಸಲಾಯಿತು ಆದರೆ ನಂತರ ಅದನ್ನು 1951 ರಲ್ಲಿ ವಿಸರ್ಜಿಸಲಾಯಿತು. ನಂತರ ಚೀನಾದಲ್ಲಿ 1985 ರಿಂದ ಸೆಪ್ಟೆಂಬರ್ 10 ರಂದು ಆಚರಿಸಲಾಯಿತು.
* ರಶಿಯಾ 1965 ರಿಂದ 1994 ರ ಅಕ್ಟೋಬರ್ ಮೊದಲ ಭಾನುವಾರದಂದು ಶಿಕ್ಷಕರ ದಿನವನ್ನು ಆಚರಿಸಿತು.
* ಯುಎಸ್ ನಲ್ಲಿ ಇದನ್ನು ಮೇ ಮೊದಲ ವಾರದ ಮಂಗಳವಾರದಂದು ಆಚರಿಸಲಾಗುತ್ತದೆ ಮತ್ತು ವಾರ ಪೂರ್ತಿ ಆಚರಿಸಲಾಗುತ್ತದೆ.
* ಥೈಲ್ಯಾಂಡ್‌ನಲ್ಲಿ ರಾಷ್ಟ್ರೀಯ ಶಿಕ್ಷಕರ ದಿನವನ್ನು ಜನವರಿ 16 ರಂದು ಆಚರಿಸಲಾಗುತ್ತದೆ.
* ಇರಾನ್‌ನಲ್ಲಿ ಪ್ರೊಫೆಸರ್ ಅಯತೊಲ್ಲಾ ಮೊರ್ಟೆಜಾ ಮೊಟೆಹರಿಯವರ ನೆನಪಿಗಾಗಿ ಶಿಕ್ಷಕರ ದಿನವನ್ನು ಮೇ 2 ರಂದು ಆಚರಿಸಲಾಗುತ್ತದೆ. .
* ಓಮನ್, ಸಿರಿಯಾ, ಲಿಬಿಯಾ, ಯುಎಇಯಂತಹ ಇಸ್ಲಾಮಿಕ್ ದೇಶಗಳು ಫೆಬ್ರವರಿ 28 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತವೆ.
* ಟರ್ಕಿಯಲ್ಲಿ ನವೆಂಬರ್ 24ರಂದು ಶಿಕ್ಷಕರ ದಿನವನ್ನು ಆಚರಿಸುತ್ತದೆ. ಮಲೇಷ್ಯಾದಲ್ಲಿ ಇದನ್ನು ಮೇ 16 ರಂದು ಆಚರಿಸಲಾಗುತ್ತದೆ. ಆ ದಿನವನ್ನು 'ಹರಿ ಗುರು' ಎಂದು ಕರೆಯುತ್ತಾರೆ.
* ಭಾರತದಲ್ಲಿ ಶಿಕ್ಷಕರ ದಿನವನ್ನು ಸೆಪ್ಟೆಂಬರ್ 5 ರಂದು 1962 ರಿಂದ ಆಚರಿಸಲಾಗುತ್ತದೆ.
* ಭಾರತ ಸರ್ಕಾರವು ದೇಶಾದ್ಯಂತದ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡುತ್ತದೆ ಮತ್ತು ಶಿಕ್ಷಕರ ದಿನಾಚರಣೆಯಂದು ಪ್ರತಿವರ್ಷ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.


Click it and Unblock the Notifications











