ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆಯಡಿ 1 ಸಾವಿರ ವಿದ್ಯಾರ್ಥಿಗಳಿಗೆ ಮಾಸಿಕ 75 ಸಾವಿರ ರೂಗಳನ್ನು ನೀಡಲು ನಿರ್ಧರಿಸಲಾಗಿದೆ.
ದೇಶದಲ್ಲಿ ಉಂಟಾಗುತ್ತಿರುವ ಪ್ರತಿಭಾ ಫಲಾಯನ ತಡೆಯಲು ಹಾಗೂ ಹೊಸ ಸಂಶೋಧನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಶ್ವಜೀತ್ ಯೋಜನೆ ಮತ್ತು ಉಚ್ಚತರ್ ಆವಿಷ್ಕಾರ್ ಯೋಜನೆಯ ಅನುಸಾರ, ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಪೂರೈಸಿದ ವಿಶ್ವವಿದ್ಯಾಲಯಗಳು ಹಾಗೂ ಐಐಟಿಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ಪ್ರತಿ ತಿಂಗಳು ರೂ. 75,000 ವಿದ್ಯಾರ್ಥಿ ವೇತನ ನೀಡಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
'ಪ್ರತಿ ತಿಂಗಳು ಒಂದು ಸಾವಿರ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಒಬ್ಬರಿಗೆ ತಿಂಗಳೊಂದಕ್ಕೆ ₹ 75 ಸಾವಿರ ನೀಡುವುದು ಸಣ್ಣ ವಿಷಯವಲ್ಲ. ಪ್ರತಿಭಾ ಫಲಾಯನ ತಡೆಯುವ ನಿಟ್ಟಿನಲ್ಲಿ ದೇಶದಲ್ಲಿ ಇಂಥ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲು' ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಮತ್ತು ಉತ್ತಮ ಅವಕಾಶಗಳಿಗಾಗಿ ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಮುಖಮಾಡುತ್ತಿದ್ದಾರೆ. ಅಲ್ಲಿ ಅವರಿಗೆ ಸಿಗುವ ಸೌಲಭ್ಯವನ್ನು ಇಲ್ಲಿಯೇ ಕಲ್ಪಿಸಿದರೆ ನಮ್ಮ ದೇಶಕ್ಕೆ ಹೆಚ್ಚಿನ ಉಪಯೋಗವಾಗಲಿದೆ. ಪ್ರತಿಭೆಗಳನ್ನು ಬೆಳಕಿಗೆ ತರಲು ಅತ್ಯುತ್ತಮ ಸಂಶೋಧನಾ ಸೌಲಭ್ಯ, ಮಾರ್ಗದರ್ಶನದ ಅಗತ್ಯವಿದೆ. ಅವುಗಳನ್ನು ಇಲ್ಲಿಯೇ ಪೂರೈಸಲಾಗುವುದು ಎಂದು ಅವರು ಹೇಳಿದರು.
ಇತ್ತೀಚೆಗೆ ಟೈಮ್ಸ್ ಸಮೀಕ್ಷೆಯಲ್ಲಿ ಭಾರತದ ವಿವಿಗಳ ಕುಸಿತದ ಬಗ್ಗೆ ಮಾತನಾಡಿದ ಅವರು ವಿವಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದರು. ಅತ್ಯುತ್ತಮ ಸಂಶೋಧನಾ ಕೇಂದ್ರಗಳಿಗಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ಸಾಲ ನೀಡಲು ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಗೆ (ಎಚ್ಇಎಫ್ಎ) 20 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ತಿಳಿಸಿದರು.


Click it and Unblock the Notifications











