ಕೋವಿಡ್-19 ಸಮಸ್ಯೆಯಿಂದಾಗಿ ರಾಜ್ಯದೆಲ್ಲೆಡೆ ಮಾರ್ಚ್ ತಿಂಗಳಾರ್ಧದಲ್ಲೇ ಶಾಲಾ ಮತ್ತು ಕಾಲೇಜುಗಳು ಮುಚ್ಚಿದ್ದವು. ಅಲ್ಲದೇ ದ್ವಿತೀಯ ಪಿಯುಸಿ ಯ ಇಂಗ್ಲೀಷ್ ಪರೀಕ್ಷೆ ಹಾಗೂ ಎಸ್‌ಎಸ್‌ಎಲ್‌ಸಿ ಯ ಎಲ್ಲಾ ಪರೀಕ್ಷೆಗಳನ್ನು ಲಾಕ್‌ಡೌನ್ ನಿಂದಾಗಿ ಮುಂದೂಡಲಾಗಿತ್ತು.

ಈಗಾಗಲೇ ಶಿಕ್ಷಣ ಇಲಾಖೆಯ ನಿರ್ದೇಶನದಂತೆ 1 ರಿಂದ 9ನೇ ತರಗತಿವರೆಗಿನ ಮಕ್ಕಳೆಲ್ಲರನ್ನೂ ಉತ್ತೀರ್ಣರೆಂದು ಪರಿಗಣಿಸಲಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಶಾಲೆ ಆರಂಭಿಸುವ ಸೂಚನೆಯನ್ನ ಪ್ರೌಢ ಶಿಕ್ಷಣ ಇಲಾಖೆ ನೀಡಿದೆ. ಇದರಿಂದಾಗಿ ಜೂನ್ ತಿಂಗಳಲ್ಲೇ ಶಾಲೆಗಳು ಆರಂಭವಾಗುವ ಸಾಧ್ಯತೆಗಳು ಬಹುತೇಕ ಖಚಿತವಾಗಿದೆ. ಜೊತೆಗೆ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆಯ ಬಗೆಗೆ ಹಲವು ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ.
ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಕ್ರಮಗಳು:
ಸುರಕ್ಷತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚಿಸಿದ್ದು, ಅದರಂತೆ ಒಂದು ಬೆಂಚ್ ನಲ್ಲಿ 3 ವಿದ್ಯಾರ್ಥಿಗಳಷ್ಟೆ ಕೂರಲು ಅಸನ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದೆ.
ಎರಡು ಪಾಳಿಯಲ್ಲಿ ತರಗತಿ ನಡೆಸಲು ಇಲಾಖೆ ನಿರ್ದೇಶಿಸಿದ್ದು, ಅದರಂತೆ ಮೊದಲ ಪಾಳಿಯ ತರಗತಿಗಳು ಬೆಳಿಗ್ಗೆ 7.50 ರಿಂದ ಆರಂಭವಾಗಿ ಮಧ್ಯಾಹ್ನ 12.20 ರವರೆಗೆ ನಡೆಯಲಿದೆ. ಆನಂತರ ಎರಡನೇ ಪಾಳಿಯು ಮಧ್ಯಾಹ್ನ 12.10 ರಿಂದ ಸಂಜೆ 5 ಗಂಟೆಯವರೆಗೂ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ. ಈ ಮೂಲಕ ವಿದ್ಯಾರ್ಥಿಗಳ ನಡುವಿನ ದೈಹಿಕ ಅಂತರ ತಪ್ಪಿಸುವ ಉದ್ದೇಶವನ್ನ ಶಿಕ್ಷಣ ಇಲಾಖೆ ಹೊಂದಿದೆ.
ಪ್ರಾರ್ಥನೆ ಸಮಯದಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಹಾಕುವುದು ಖಡ್ಡಾಯವಿವೆಂದು ಸೂಚಿಸಿದ್ದು, ಸ್ವಚ್ಛತೆ ಹಾಗೂ ಅನ್ನ ದಾಸೋಹ, ಕ್ಷೀರ ಭಾಗ್ಯಗಳು ಇರುವ ಹಾಗೆ ನೋಡಿಕೊಳ್ಳುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಯೋಜನೆಯಲ್ಲಿ ಹೆಚ್ಚಿನ ಬದಲಾವಣೆ ಅಥವಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಆಯಾ ತಾಲೂಕು ಶಿಕ್ಷಣಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವುದಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಹಾಗೂ ಪಠ್ಯಗಳನ್ನ ಕಡಿತಮಾಡುವ ವಿಚಾರವನ್ನ ಶಿಕ್ಷಣ ಇಲಾಖೆ ಸದ್ಯ ಬಿಡುಗಡೆಗೊಳಿಸಿರುವ ಅಧಿಸೂಚನೆಯಲ್ಲಿ ತಿಳಿಸಿರುವುದಿಲ್ಲ.


Click it and Unblock the Notifications











