ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಇಂದಿನಿಂದ ಪ್ರಾರಂಭ

Posted By:

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ(ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಇಂದಿನಿಂದ ಪ್ರಾರಂಭವಾಗಿವೆ. ಒಟ್ಟು 19 ಲಕ್ಷ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯುತ್ತಿದ್ದಾರೆ.

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳು ಮಾರ್ಚ್‌ 9ರಿಂದ ಏಪ್ರಿಲ್‌ 29ರವರೆಗೆ ನಡೆಯಲಿವೆ. ಫಂಕ್ಷನಲ್ ಇಂಗ್ಲಿಷ್ ಮತ್ತು ಎಲೆಕ್ಟಿವ್ ಇಂಗ್ಲಿಷ್ ಪರೀಕ್ಷೆಗಳ ಮೂಲಕ ಹನ್ನೆರಡನೇ ತರಗತಿ ಪ್ರಾರಂಭವಾದರೆ, ಹದಿನಾರು ವಿವಿಧ ವಿಷಯಗಳ ಪರೀಕ್ಷೆ ಮೂಲಕ ಹತ್ತನೇ ತರಗತಿ ಪರೀಕ್ಷೆಗಳು ಪ್ರಾರಂಭಗಲಿವೆ.

ಸಿಬಿಎಸ್‌ಇ ಪರೀಕ್ಷೆಗಳು ಪ್ರಾರಂಭ

ಸಿಬಿಎಸ್ಇ

ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯ, ಖಾಸಗಿ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಿಯಂತ್ರಿಸುತ್ತದೆ. ಮಂಡಳಿಯು 1962 ರಲ್ಲಿ ಸ್ಥಾಪನೆಗೊಂಡು ಈವರೆಗೂ ತನ್ನದೇ ಆದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿದೆ.

ಈ ವರ್ಷ ಅತೀ ಹೆಚ್ಚು ವಿದ್ಯಾರ್ಥಿಗಳು

10ನೇ ತರಗತಿ ಪರೀಕ್ಷೆಗೆ 8,86,506 ವಿದ್ಯಾರ್ಥಿಗಳು ಹಾಗೂ 12ನೇ ತರಗತಿ ಪರೀಕ್ಷೆಗೆ 10,98,891 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಹತ್ತನೇ ತರಗತಿಗೆ ಹೆಚ್ಚುವರಿಯಾಗಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ, ಇನ್ನು 12ನೇ ತರಗತಿಯಲ್ಲಿ 30,000 ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಚೆನ್ನೈನಿಂದ ಅತೀ ಹೆಚ್ಚು ವಿದ್ಯಾರ್ಥಿಗಳು ಪರಿಕ್ಷೆ ಬರೆಯುತ್ತಿದ್ದಾರೆ, ಒಟ್ಟು 1,54,401 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇನ್ನು ಹನ್ನೆರಡನೇ ತರಗತಿ ಪರಿಕ್ಷೆಯನ್ನು ದೆಹಲಿಯಿಂದ ಹೆಚ್ಚು ವಿದ್ಯಾರ್ಥಿಗಳು ಬರೆಯುತ್ತಿದ್ದು, 2,58,321 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.

ವಿದ್ಯಾರ್ಥಿನಿಯರ ಸಂಖ್ಯೆ ಇಳಿಮುಖ

ಈ ವರ್ಷದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಬಾಲಕರಿಗೆ ಹೋಲಿಸಿದರೆ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇದೆ. 3,70,615 ಬಾಲಕಿಯರು ಮತ್ತು 5,15,891 ಬಾಲಕರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇನ್ನು 12 ನೇ ತರಗತಿಯಲ್ಲೂ ಬಾಲಕಿಯರ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿದೆ. 4,60,026 ಬಾಲಕಿಯರು ಮತ್ತು 6,38,865 ಬಾಲಕರು ಪರಿಕ್ಷೆ ಬರೆಯುತ್ತಿದ್ದಾರೆ.

ಹೆಚ್ಚು ಪರೀಕ್ಷಾ ಕೇಂದ್ರಗಳು

ಭಾರತದಲ್ಲಿ ಒಟ್ಟು 16 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ವಿದೇಶಗಳಲ್ಲು ಸಿಬಿಎಸ್ಇ ಪರೀಕ್ಷೆಗಳು ನಡೆಯುತ್ತಿದ್ದು ಗಲ್ಫ್ ದೇಶಗಳಲ್ಲಿ 58 ಕೇಂದ್ರಗಳು ಸೇರಿದಂತೆ ಇತರೆ ದೇಶಗಳ 6 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ.

ಸಾಮಾನ್ಯವಾಗಿ ಸಿಬಿಎಸ್‌ಇ 10ನೆ ಹಾಗೂ 12ನೆ ತರಗತಿಯ ವಾರ್ಷಿಕ ಪರೀಕ್ಷೆಗಳು ಮಾರ್ಚ್ 1ರಿಂದ ಆರಂಭವಾಗುತ್ತಿದ್ದವು. ಆದರೆ ಈ ಬಾರಿ ಪಂಜಾಬ್,ಗೋವಾ, ಮಣಿಪುರ, ಉತ್ತರಾಖಂಡ ಹಾಗೂ ಉತ್ತರಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗಳು ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನಿರ್ಧರಿಸಿತ್ತು.

English summary
cbse class 10 and class 12 exams begin today

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia