ರಾಜ್ಯದಾದ್ಯಂತ ವ್ಯಾಪಿಸಿದ್ದ ಕೊರೊನಾ ಸೋಂಕು ಮತ್ತು ಓಮಿಕ್ರಾನ್ ಸೋಂಕಿನ ಪರಿಣಾಮ ಕಾಲೇಜುಗಳಲ್ಲಿ ಪಠ್ಯಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪದವಿ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡುವಂತೆ ಆದೇಶಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಎಲ್ಲಾ ವಿಶ್ವವಿದ್ಯಾಲಯಗಳ ಪದವಿ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡುವಂತೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಅವರು ವಿಶ್ವವಿದ್ಯಾಲಯಗಳ ಕುಲಸಚಿವರುಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, "ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿವೆ. ಆದರೆ ಕೊರೊನಾ ಸೋಂಕು ಮತ್ತು ಓಮಿಕ್ರಾನ್ ಸೋಂಕಿನ ಪರಿಣಾಮ ಪಠ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪರೀಕ್ಷೆಯನ್ನು ಮುಂದೂಡುವಂತೆ ಕೋರಿದ್ದರು. ಹೀಗಾಗಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನಿಸಿ, ಪರೀಕ್ಷೆಯನ್ನು ಮುಂದೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ,'' ಎಂದು ಹೇಳಿದ್ದಾರೆ.
ಕೋವಿಡ್ ನಿಂದಾಗ ಒಂದೂವರೆ ವರ್ಷಗಳ ಕಾಲ ಶಾಲಾ ಕಾಲೇಜುಗಳನ್ನು ಮಚ್ಚಲಾಗಿತ್ತು. ಕೋವಿಡ್ ಇಳಿಕೆಯಿಂದಾಗಿ ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲಾಗಿತ್ತು. ಬಳಿಕ ರಾಜ್ಯದಲ್ಲಿ ಬುಗಿಲೆದ್ದ ಹಿಜಾಬ್ ವಿವಾದದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ತದನಂತರ ಹಂತ ಹಂತವಾಗಿ 10ನೇ ತರಗತಿವರೆಗಿನ ಶಾಲೆಗಳು ಮತ್ತು ಪದವಿ ಹಾಗೂ ಪಿಯು ಕಾಲೇಜುಗಳನ್ನು ತೆರೆಯಲಾಗಿದೆ. ಆದರೂ ಹಲವು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತೆ ಮೊದಲಿನಂತೆ ಆರಂಭವಾಗಿಲ್ಲ, ಕೆಲವೆಡೆ ನಿಷೇಧಾಜ್ಞೆ ಜಾರಿಯಲ್ಲಿದೆ. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಇಲಾಖೆಯು ಮಹತ್ವದ ಘೋಷಣೆಯನ್ನು ಹೊರಡಿಸಿದೆ.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ವೇಳಾಪಟ್ಟಿಯ ಅನುಸಾರ ನಿಗದಿತ ದಿನಾಂಕಗಳಲ್ಲೇ ಪರೀಕ್ಷೆಗಳು ನಡೆಯಲಿವೆ ಎಂದು ಉನ್ನತ ಶಿಕ್ಷಣ ಸಚಿವರು ಈ ಮುಂಚೆಯೇ ಹೇಳಿದ್ದಾರೆ.