ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಅಭ್ಯರ್ಥಿಗಳ ವಿದ್ಯಾರ್ಹತೆ ವಿವರ

Posted By:

ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಪ್ರತಿ ವಿಷಯ ಹಾಗೂ ಮಾಧ್ಯಮದ ಹುದ್ದೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ವಿದ್ಯಾರ್ಹತೆ ವಿವರಗಳು ಕೆಳಗಿನಂತೆ ಇರುತ್ತವೆ.

ಈ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಸೆಪ್ಟೆಂಬರ್ 25 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪರೀಕ್ಷಾ ಸೂಚನೆಗಳು

ಪದವೀಧರ ಪ್ರಾಥಮಿಕ ಶಿಕ್ಷಕ [ಭಾಷೆ - ಆಂಗ್ಲ]

ಪದವೀಧರ ಪ್ರಾಥಮಿಕ ಶಿಕ್ಷಕ (ಭಾಷೆ- ಆಂಗ್ಲ) ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು:

 1. ಪದವಿಯಲ್ಲಿ ಆಂಗ್ಲ ಭಾಷೆಯನ್ನು ಐಚ್ಛಿಕ ವಿಷಯವಾಗಿ ಮೂರು ವರ್ಷವೂ ಅಧ್ಯಯನ ಮಾಡಿರಬೇಕು ಮತ್ತು ಕನ್ನಡ, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಕೊಂಕಣಿ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಭೂಗೋಳಶಾಸ್ತ್ರ ಈ ಯಾವುದಾದರೂ ವಿಷಯಗಳ ಪೈಕಿ ಒಂದು ವಿಷಯವನ್ನು ಮೂರು ವರ್ಷವೂ ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿರಬೇಕು.
 2. ಐಚ್ಛಿಕ ಆಂಗ್ಲಭಾಷೆಯಲ್ಲಿ ಕನಿಷ್ಟ ಶೇಕಡ 50ರಷ್ಟು ಅಂಕಗಳನ್ನು ಮತ್ತು ಮೇಲ್ಕಾಣಿಸಿದ ಇತರೆ ವಿಷಯಗಳ ಪೈಕಿ ಒಂದು ವಿಷಯದಲ್ಲಿ ಕನಿಷ್ಟ ಶೇಕಡ 50ರಷ್ಟು ಅಂಕಗಳನ್ನು ಗಳಿಸಿರಬೇಕು. ಪರಂತು ಪರಿಶಿಷ್ಟಜಾತಿ /ಪರಿಶಿಷ್ಟ ವರ್ಗ/ ಇತರೆ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1 / ವಿಕಲಚೇತನರಿಗೆ, ನಿಗದಿಪಡಿಸಿರುವ ಎರಡು ವಿಷಯಗಳಲ್ಲಿ ಕನಿಷ್ಟ ಶೇಕಡ 45 ಅಂಕಗಳನ್ನು ಪಡೆದಿರಬೇಕು.
 3. ಶಿಕ್ಷಣದಲ್ಲಿ ಡಿಪ್ಲೋಮಾ ಅಥವಾ ಪದವಿ ಹಂತಗಳಲ್ಲಿ ಆಂಗ್ಲಭಾಷೆಯನ್ನು ಬೋಧನಾವಿಷಯವಾಗಿ (ಮೆಥಡಾಲಜಿ) ಅಭ್ಯಾಸ ಮಾಡಿರಬೇಕು.
  ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿದ್ಯಾರ್ಹತೆ

ಪದವೀಧರ ಪ್ರಾಥಮಿಕ ಶಿಕ್ಷಕ [ಗಣಿತ ಮತ್ತು ವಿಜ್ಞಾನ]

ಪದವೀಧರ ಪ್ರಾಥಮಿಕ ಶಿಕ್ಷಕ (ಗಣಿತ ಮತ್ತು ವಿಜ್ಞಾನ) ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು:

 1. ಪದವಿಯಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಮೂರು ವರ್ಷವೂ ಅಧ್ಯಯನ ಮಾಡಿರಬೇಕು. ಹಾಗು ಪ್ರತಿ ವಿಷಯದಲ್ಲಿಯೂ ಕನಿಷ್ಟ ಶೇ. 50 ರಷ್ಟು ಅಂಕಗಳನ್ನು ಪಡೆದಿರಬೇಕು. ಪರಂತು ಪರಿಶಿಷ್ಟಜಾತಿ/ ಪರಿಶಿಷ್ಟ ವರ್ಗ/ ಇತರೆ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1/ ವಿಕಲಚೇತನರಿಗೆ, ನಿಗದಿಪಡಿಸಿರುವ ಮೂರೂ ವಿಷಯಗಳಲ್ಲಿ ಕನಿಷ್ಟ ಶೇಕಡ 45 ಅಂಕಗಳನ್ನು ಪಡೆದಿರಬೇಕು.
 2. ಶಿಕ್ಷಣದಲ್ಲಿ, ಡಿಪ್ಲೋಮಾ ಅಥವಾ ಪದವಿ ಹಂತಗಳಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳ ಪೈಕಿ ಯಾವುದಾದರೊಂದು ವಿಷಯವನ್ನು ಬೋಧನಾ ವಿಷಯವಾಗಿ (ಮೆಥಡಾಲಜಿ) ಅಭ್ಯಾಸ ಮಾಡಿರಬೇಕು.

ಪದವೀಧರ ಪ್ರಾಥಮಿಕ ಶಿಕ್ಷಕ [ಸಮಾಜ ಪಾಠಗಳು]

ಪದವೀಧರ ಪ್ರಾಥಮಿಕ ಶಿಕ್ಷಕ (ಸಮಾಜ ಪಾಠಗಳು) ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು:

 1. ಪದವಿಯಲ್ಲಿ ಇತಿಹಾಸ/ ಅರ್ಥಶಾಸ್ತ್ರ/ ಭೂಗೋಳಶಾಸ್ತ್ರ/ ರಾಜ್ಯಶಾಸ್ತ್ರ ವಿಷಯಗಳ ಪೈಕಿ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಮೂರು ವರ್ಷವೂ ಅಧ್ಯಯನ ಮಾಡಿರಬೇಕು. ಸದರಿ ಎರಡು ವಿಷಯಗಳಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು.
 2. ಇತಿಹಾಸ/ ಅರ್ಥಶಾಸ್ತ್ರ/ ಭೂಗೋಳಶಾಸ್ತ್ರ/ ರಾಜ್ಯಶಾಸ್ತ್ರ ವಿಷಯಗಳ ಪೈಕಿ ಒಂದು ವಿಷಯದಲ್ಲಿ ಮೂರು ವರ್ಷವೂ ಅಧ್ಯಯನ ಮಾಡಿರುವುದರೊಂದಿಗೆ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು ಕನ್ನಡ/ ಇಂಗ್ಲಿಷ್/ ಹಿಂದಿ/ಮರಾಠಿ/ ಉರ್ದು/ ತೆಲುಗು/ ತಮಿಳು/ ಕೊಂಕಣಿ ಭಾಷೆಗಳ ಪೈಕಿ ಒಂದು ಭಾಷೆಯನ್ನು ಐಚ್ಛಿಕವಾಗಿ ಮೂರು ವರ್ಷವೂ ಅಧ್ಯಯನ ಮಾಡಿ ಸದರಿ ಭಾಷಾ ವಿಷಯದಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು. ಪರಂತು ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗ/ಇತರೆ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1/ ವಿಕಲಚೇತನರಿಗೆ ನಿಗದಿಪಡಿಸಿರುವ ಎರಡು ವಿಷಯಗಳಲ್ಲಿ ಕನಿಷ್ಟ ಶೇಕಡ 45 ಅಂಕಗಳನ್ನು ಪಡೆದಿರಬೇಕು.
 3. ಶಿಕ್ಷಣದಲ್ಲಿ, ಡಿಪ್ಲೋಮಾ ಅಥವಾ ಪದವಿ ಹಂತಗಳಲ್ಲಿ ಇತಿಹಾಸ/ ಅರ್ಥಶಾಸ್ತ್ರ/ ಭೂಗೋಳಶಾಸ್ತ್ರ/ ರಾಜ್ಯಶಾಸ್ತ್ರ ವಿಷಯಗಳ ಪೈಕಿ ಒಂದು ವಿಷಯವನ್ನು ಬೋಧನಾ ವಿಷಯವಾಗಿ (ಮೆಥಡಾಲಜಿ) ಅಭ್ಯಾಸ ಮಾಡಿರಬೇಕು.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪ್ರಶ್ನೆಪ್ರತ್ರಿಕೆ ಮತ್ತು ಅಂಕಗಳ ವಿವರ

ಸಾಮಾನ್ಯ ಸೂಚನೆಗಳು

 1. 6 ರಿಂದ 7/8 ನೇ ತರಗತಿಗಳ ಶಾಲೆಗಳಿಗೆ ನೇಮಕವಾಗುವ ಪದವೀಧರ ಪ್ರಾಥಮಿಕ ಶಿಕ್ಷಕರು ಕಾರ್ಯಭಾರದ ಹೊಂದಾಣಿಕೆಗೆ ಅದೇ ಶಾಲೆಯ ಅಥವಾ ಹತ್ತಿರದ ಶಾಲೆಯ ತರಗತಿಗಳಿಗೆ ಅವರು ನೇಮಕಾತಿ ಹೊಂದಿರುವ ವಿಷಯದ ಜೊತೆಗೆ ಯಾವುದೇ ಇತರೆ ವಿಷಯಗಳ ಬೋಧನೆ ಮಾಡಲು ಸೂಚಿಸಬಹುದು.
 2. ಆಂಗ್ಲ ಮತ್ತು ಸಮಾಜ ಪಾಠಗಳು ವಿಷಯಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎರಡೂ ಹುದ್ದೆಗಳಿಗೆ ಆಯ್ಕೆಯಾದಲ್ಲಿ ಪ್ರಥಮ ಆಧ್ಯತೆ ನೀಡಿದ ಹುದ್ದೆಗೆ ಮಾತ್ರ ಪರಿಗಣಿಸಲಾಗುವುದು.
 3. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನಿಗದಿತ ವಿದ್ಯಾರ್ಹತೆ ಪಡೆಯಲು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಹರಾಗುವುದಿಲ್ಲ. ಆನ್‍ಲೈನ್ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗೆ ವಿದ್ಯಾರ್ಹತೆಯ ಅಂಕಪಟ್ಟಿ ಹಾಗೂ ಇತರೆ ಸರ್ಟಿಫಿಕೇಟ್‍ಗಳನ್ನು ಪಡೆದಿರಬೇಕು.

English summary
Educational qualification details of the Higher primary school teachers post.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia